ಉದ್ಯಮಿ ಅಜಯ್​ ಪುರುಷೋತ್ತಮ ಶೆಟ್ಟಿ ರಾಷ್ಟ್ರೀಯ ಯುವ ಸಂಸತ್​ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. 
ಉಡುಪಿ

ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಪ್ರಮುಖ: ಅಜಯ್​ ಶೆಟ್ಟಿ

ಬನಾರಸ್​ ಹಿಂದೂ ವಿಶ್ವವಿದ್ಯಾಲಯದ (ಬಿಎಚ್​ಯು) ಸ್ವತಂತ್ರತಾ ಭವನದಲ್ಲಿ ಅ. 3 ರಿಂದ 5 ರವರೆಗೆ ರಾಷ್ಟ್ರೀಯ ಯುವ ಸಂಸತ್​ ಸಮಾರೋಪ ಸಮಾರಂಭ ನಡೆಯಿತು.

ಉಡುಪಿ: ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ತಾಂತ್ರಿಕ ಪ್ರಗತಿ ಮತ್ತು ಕೌಶಲ್ಯಗಳೊಂದಿಗೆ ಸಂಸತಿ ಹಾಗೂ ನಾಗರಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ವಿಕಸಿತ ಭಾರತ&2047 ನಿಮಾರ್ಣಕ್ಕೆ ಕೊಡುಗೆ ನೀಡಬೇಕು ಎಂದು ಸಾಮಾಜಿಕ ಚಿಂತಕ, ಉಡುಪಿಯ ಉದ್ಯಮಿ ಅಜಯ್​ ಪುರುಷೋತ್ತಮ ಶೆಟ್ಟಿ ತಿಳಿಸಿದರು.

ಬನಾರಸ್​ ಹಿಂದೂ ವಿಶ್ವವಿದ್ಯಾಲಯದ (ಬಿಎಚ್​ಯು) ಸ್ವತಂತ್ರತಾ ಭವನದಲ್ಲಿ ಅ. 3 ರಿಂದ 5 ರವರೆಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವ ಸಂಸತ್​ ಸಮಾರೋಪ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಜ್ಞಾನದ ಅನ್ವೇಷಣೆಯಲ್ಲಿ ತೊಡಗಿರುವ ಪವಿತ್ರ ಭೂಮಿಯೇ ಭಾರತ. ಜ್ಞಾನದ ನಗರಿಯಾದ ಕಾಶಿಯಲ್ಲಿ ಈ ಪರಿಕಲ್ಪನೆ ಜೀವಂತವಾಗಿದೆ. ನಡವಳಿಕೆ, ಕರ್ಮ ಮತ್ತು ಚಾರಿತ್ರ್ಯವೇ ನಮ್ಮನ್ನು ನಿರೂಪಿಸುತ್ತವೆ. ಯುವಕರು ಯಾವುದೇ ಕ್ಷೇತ್ರದಲ್ಲಿ ವೃತ್ತೀಜಿವನ ರೂಪಿಸಿಕೊಂಡರೂ ರಾಷ್ಟ್ರಪ್ರಥಮ ಎಂಬ ಭಾವನೆಯನ್ನು ಸದಾ ಜೀವಂತವಾಗಿಟ್ಟುಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯವನ್ನು ಗುರುತಿಸಿ ದೇಶದ ಪ್ರಗತಿಗೆ ವಿನಿಯೋಗಿಸಬೇಕು ಎಂದರು.

ವಾರಣಾಸಿ ಮತ್ತು ಕರ್ನಾಟಕದ ಮಧ್ಯೆ ಐತಿಹಾಸಿಕ ಬಾಂಧವ್ಯವಿದೆ. ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್​ ಬಿಎಚ್​ಯುವಿನ ಪ್ರಥಮ ಚಾನ್ಸಲರ್​ ಆಗಿದ್ದರು. ಶೃಂಗೇರಿಯ ಶಾರದಾ ಪೀಠದಿಂದ ಶ್ರೀಗಳ ಗುರು ಪಾದುಕೆಗಳನ್ನು ವಿಶ್ವವಿದ್ಯಾಲಯದ ತಳಪಾಯದ ಸಂದರ್ಭದಲ್ಲಿ ಕಳುಹಿಸಿಕೊಡಲಾಗಿತ್ತು ಎಂದರು.

ಕಾರ್ಯಕ್ರಮದ ಸಂಚಾಲಕ ಪ್ರೊ. ಲಲಿತ್​ ಮೋಹನ್​ ಅಗರ್​ವಾಲ್​ ಅವರು ಅಜಯ್​ ಶೆಟ್ಟಿ ಅವರನ್ನು ಗೌರವಿಸಿದರು. ಬಿಎಚ್​ಯು ಕುಲಪತಿ ಪ್ರೊ. ಅಜಿತ್​ ಕುಮಾರ್​ ಚತುರ್ವೇದಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್​ ಪ್ರೊ. ರಂಜನ್​ ಕುಮಾರ್​ ಸಿಂಗ್​, ಅಜಂಗಢದ ಎಸ್​ಪಿ ಚಿರಾಗ್​ ಜೈನ್​, ಪ್ರಮುಖ ವಕ್ತಾರ ಸಮರ್ಜಿತ್​ ಮಿಶ್ರಾ ಮೊದಲಾದವರು ಉಪಸ್ಥಿತರಿದ್ದರು.