ಉಡುಪಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯನ್ನು ಹಾಸೀಬ್ ಉದ್ಘಾಟಿಸಿದರು. ಗಣನಾಥ ಶೆಟ್ಟಿ ಎಕ್ಕಾರು, ಡಾ.ನಿಕೇತನಾ, ದಿವ್ಯಾ ಪೈ, ರಮಾದೇವಿ, ಸುನಂದಾ ಇದ್ದರು.
* ಲೇಖಕಿ ಡಾ. ನಿಕೇತನಾ ಅನಿಸಿಕೆ
* ರಾಷ್ಟ್ರೀಯ ಯುವ ದಿನಾಚರಣೆ
ಉಡುಪಿ: ಬಹುತ್ವವೆಂದರೆ ಎಲ್ಲ ಧರ್ಮಗಳ ನಿಜವಾದ ಸಾರ ಅರ್ಥಮಾಡಿಕೊಂಡು ಸಮನ್ವಯದಿಂದ ಬದುಕುವುದಾಗಿದೆ. ಸ್ವಾಮಿ ವಿವೇಕಾನಂದರು ಈ ತತ್ವವನ್ನು ದೇಶ&ವಿದೇಶಗಳಲ್ಲೂ ಪಸರಿಸುವ ಮೂಲಕ ಭಾರತದ ಘನತೆ ಹೆಚ್ಚಿಸಿದ್ದಾರೆ. ನಮ್ಮ ಸಂವಿಧಾನದ ಮೂಲತತ್ವವೂ ಸಹ ಇದೇ ಆಗಿದ್ದು, ವಿವೇಕಾನಂದರ ಚಿಂತನೆಗಳು ದೇಶದ ಬಹುತ್ವದ ಅಡಿಪಾಯವಾಗಿದೆ ಎಂದು ಚಿಂತಕಿ ಡಾ. ನಿಕೇತನಾ ಅನಿಸಿಕೆ ವ್ಯಕ್ತಪಡಿಸಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಸಾಲಿಹಾತ್ ಶಿಕ್ಷಣ ಸಂಸ್ಥೆ ತೋನ್ಸೆ, ಬಾಲಕಿಯರ ಪದವಿ ಪೂರ್ವ ಕಾಲೇಜು ಹೂಡೆ, ಸಾಲಿಹಾತ್ ಅಂಗ್ಲ ಮಾಧ್ಯಮ ಪ್ರೌಢಶಾಲೆ ಹೂಡೆ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.
ಸಮಾರಂಭ ಉದ್ಘಾಟಿಸಿದ ಅಕಾಡೆಮಿಯ ಮುಖ್ಯಸ್ಥ ಹಾಸೀಬ್ ಮಾತನಾಡಿ, ನಮ್ಮ ಹಿರಿಯರು ಕಾಯ್ದುಕೊಂಡು ಬಂದ ಧರ್ಮ ಸಮನ್ವಯ ಮತ್ತು ಅಹಿಂಸೆಯನ್ನು ನಾವು ಪಾಲಿಸಬೇಕಿದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ದಿವ್ಯಾ ಪೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೆಡ್ ಕ್ರಾಸ್ ಖಚಾಂಚಿ ರಮಾದೇವಿ ಉಪಸ್ಥಿತರಿದ್ದರು. ಶಿಕ್ಷಕಿ ಶಮೀನಾ ಪ್ರಾರ್ಥಿಸಿದರು. ಜಿಲ್ಲಾ ರೆಡ್ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಸಾಲಿಹಾತ್ ಅಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಸುನಂದಾ ವಂದಿಸಿದರು.