ಮಣಿಪಾಲದ ಕೆಎಂಸಿಯಲ್ಲಿ ಆಯೋಜಿಸಿದ್ದ 'ರಕ್ತ ವರ್ಗಾವಣೆ ಸೇವೆಯ ಕಾರ್ಯಾಗಾರವನ್ನು ಡಾ. ಶರತ್ ರಾವ್ ಉದ್ಘಾಟಿಸಿದರು. ಡಾ. ಮೇಘಾ ಪ್ರವೀಣ್ ಖೋಬ್ರಗಡೆ, ಡಾ. ಶಮೀ ಶಾಸ್ತ್ರಿ, ಡಾ. ಅವಿನಾಶ್ ಶೆಟ್ಟಿ, ಡಾ. ಅನಿಲ್ ಭಟ್, ಡಾ. ಗಣೇಶ್ ಮೋಹನ್ ಇದ್ದರು.
* ಸಹ ಉಪಕುಲಪತಿ ಡಾ. ಶರತ್ ರಾವ್ ಅಭಿಪ್ರಾಯ
* ಮಣಿಪಾಲದ ಕೆಎಂಸಿಯಲ್ಲಿ ರಾಷ್ಟ್ರೀಯ ಕಾರ್ಯಾಗಾರ
ಉಡುಪಿ: ದೇಶದಲ್ಲಿ ರಕ್ತದಾನ ಸೇವೆ, ವರ್ಗಾವಣೆ ಕಾರ್ಯ ಬಲಪಡಿಸುವಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಬಹಳ ಮುಖ್ಯವಾಗಿದೆ. ಇಂತಹ ಸಹಯೋಗದಿಂದ ರೋಗಿಗಳಿಗೆ ಗುಣಮಟ್ಟದ ಸೇವೆ, ಸುರಕ್ಷತೆ ಒದಗಿಸಲು ಸಹಾಯ ಮಾಡುತ್ತದೆ. ಗುಣಮಟ್ಟದ ರಕ್ತ ಒದಗಿಸುವಲ್ಲಿ ಮತ್ತು ಬಲವಾದ ಸುರಕ್ಷತಾ ಮಾನದಂಡ ಕಾಯ್ದುಕೊಳ್ಳುವಲ್ಲಿ ಮಣಿಪಾಲದ ಕೆಎಂಸಿಯ ಇಮ್ಯುನೊಹೆಮಟಾಲಜಿ ಮತ್ತು ರಕ್ತ ವರ್ಗಾವಣೆ ವಿಭಾಗ ಮುಂಚೂಣಿಯಲ್ಲಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಸಹ ಉಪಕುಲಪತಿ ಡಾ. ಶರತ್ ರಾವ್ ತಿಳಿಸಿದರು.
ಮಣಿಪಾಲದ ಡಾ. ಟಿಎಂಎ ಪೈ ಸಭಾಂಗಣದಲ್ಲಿ ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿ (ಎನ್ಬಿಟಿಸಿ), ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜ್ (ಕೆಎಂಸಿ) ಸಹಯೋಗದೊಂದಿಗೆ ಆಯೋಜಿಸಿದ್ದ 'ರಕ್ತ ವರ್ಗಾವಣೆ ಸೇವೆಗಳಲ್ಲಿ ಸಾರ್ವಜನಿಕ-ಖಾಸಗಿ ಸಹಯೋಗ ಬಲಪಡಿಸುವಿಕೆ' ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸವಾಲು ನಿವಾರಿಸುವ ಗುರಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉಪ ಮಹಾನಿರ್ದೇಶಕಿ (ಬಿಟಿಎಸ್) ಡಾ. ಮೇಘಾ ಪ್ರವೀಣ್ ಖೋಬ್ರಗಡೆ ಮಾತನಾಡಿ, ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಸಮನ್ವಯದೊಂದಿಗೆ ರಕ್ತ ವರ್ಗಾವಣೆಯ ಸೇವೆ ಬಲಪಡಿಸಲು ಈ ಕಾರ್ಯಾಗಾರ ಆಯೋಜಿಲಸಲಾಗಿದೆ. ಖಾಸಗಿ ರಕ್ತ ಕೇಂದ್ರಗಳು ಎದುರಿಸುತ್ತಿರುವ ಸವಾಲು ಪರಿಹರಿಸುವುದು ಮತ್ತು ದೇಶಾದ್ಯಂತ ಹೆಚ್ಚು ಪರಿಣಾಮಕಾರಿ ಮತ್ತು ಸುರಕ್ಷಿತ ರಕ್ತ ಸೇವಾ ವ್ಯವಸ್ಥೆ ನಿರ್ಮಿಸುವುದು ನಮ್ಮ ಗುರಿಯಾಗಿದೆ ಎಂದರು.
ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿದರು. ಕಾರ್ಯಾಗಾರದಲ್ಲಿ ದಕ್ಷಿಣ ಮತ್ತು ಪೂರ್ವ ಭಾರತದ 100ಕ್ಕೂ ಹೆಚ್ಚು ವೈದ್ಯಕೀಯ ಅಧಿಕಾರಿಗಳು ಮತ್ತು ರಕ್ತ ಕೇಂದ್ರದ ಉಸ್ತುವಾರಿಗಳು ಪಾಲ್ಗೊಂಡಿದ್ದರು. ಮಣಿಪಾಲದ ಕೆಎಂಸಿಯ ಡೀನ್ ಡಾ. ಅನಿಲ್ ಭಟ್ ಸ್ವಾಗತಿಸಿದರು. ಐಎಚ್ಬಿಟಿಯ ಮುಖ್ಯಸ್ಥ ಡಾ. ಗಣೇಶ್ ಮೋಹನ್ ವಂದಿಸಿದರು.
ತಜ್ಞರಿಂದ ವೈಜ್ಞಾನಿಕ ವಿಚಾರಗೋಷ್ಠಿ
ಕಾರ್ಯಾಗಾರದಲ್ಲಿ ರಾಷ್ಟ್ರೀಯ ಮಟ್ಟದ ತಜ್ಞರು ವಿಚಾರಗೋಷ್ಠಿ ನಡೆಸಿದರು. ಡಾ. ಮೇಘಾ ಪ್ರವೀಣ್ ಖೋಬ್ರಗಡೆ- ರಾಷ್ಟ್ರೀಯ ರಕ್ತ ನೀತಿ, ಡಾ. ಶಮೀ ಶಾಸ್ತ್ರಿ- ಗುಣಮಟ್ಟದ ಭರವಸೆ ಮತ್ತು ಇಕ್ಯೂಎಎಸ್ ಕುರಿತು, ಡಾ. ಗಣೇಶ್ ಮೋಹನ್- ಖಾಸಗಿ ರಕ್ತ ಕೇಂದ್ರಗಳು ಎದುರಿಸುತ್ತಿರುವ ಸವಾಲು, ಮಾಯಾಂಕ್- ಇ-ರಕ್ತಕೋಶದ ಕುರಿತು, ಡಾ. ಪುರುಷೋತ್ತಮ್ ಪುರಿ- ಸ್ವಯಂಪ್ರೇರಿತ ರಕ್ತದಾನ ಉತ್ತೇಜನ, ಡಾ. ದೀಪಿಕಾ ಚೆನ್ನಾ- ನ್ಯೂಕ್ಲಿಯಿಕ್ ಆಮ್ಲ ಪರೀಕ್ಷೆ (ಎನ್ಎಟಿ), ಡಾ. ರೂಬಿ ಖಾನ್- ಸಾಮರ್ಥ್ಯ ವೃದ್ಧಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ಕುರಿತು ಚರ್ಚಿಸಿದರು.
ಖಾಸಗಿ ರಕ್ತ ಕೇಂದ್ರಗಳು ಎನ್ಬಿಟಿಸಿಯೊಂದಿಗೆ ನೇರ ಸಂವಹನ ನಡೆಸಿದ ಮೊದಲ ಕಾರ್ಯಾಗಾರ ಇದಾಗಿದೆ. ದೇಶಾದ್ಯಂತ ರಕ್ತದ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡ ಸುಧಾರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಪ್ರಮುಖ ಹೆಜ್ಜೆಯಾಗಿದೆ.