ಉಡುಪಿಯ ತೆಂಕನಿಡಿಯೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ನಿತ್ಯಾನಂದ್ ವಿ. ಗಾಂವ್ಕರ್, ಗಣನಾಥ್ ಶೆಟ್ಟಿ, ಡಾ.ಜಯಕರ್ ಶೆಟ್ಟಿ, ರಾಜೇಶ್ ಕೆ.ಸಿ., ಬಸವರಾಜ್, ಶಿವರಾಂ ಶೆಟ್ಟಿ, ಡಾ.ರೋಶನ್ ಶೆಟ್ಟಿ, ಶಾಲಿನಿ, ಶ್ರೀದೇವಿ ಇತರರಿದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಶಯ
* ಜಿಲ್ಲಾ ಮಟ್ಟದ ರಾಷ್ಟ್ರೀಯ ಕ್ರೀಡಾ ದಿನ ಉದ್ಘಾಟನೆ
ಉಡುಪಿ: ವಿಶ್ವವೇ ಕಂಡ ಅತ್ಯದ್ಭುತ ಹಾಕಿ ಕ್ರೀಡಾಪಟು, ದಂತಕಥೆ ಮೇಜರ್ ಧ್ಯಾನ್ಚಂದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಅವರ ಕ್ರೀಡಾ ಸಾಧನೆಗಳನ್ನು ಜಿಲ್ಲೆಯ ಯುವ ಕ್ರೀಡಾಪಟುಗಳು ಅರಿತು, ಸ್ಫೂರ್ತಿ ಪಡೆಯಬೇಕು. ಒಲಿಂಪಿಕ್ನಲ್ಲಿ ಸ್ವರ್ಣ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಆಶಯ ವ್ಯಕ್ತಪಡಿಸಿದರು.
ಉಡುಪಿ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಾಲೇಜಿನ ಐಕ್ಯೂಎಸಿ ಕ್ರೀಡಾ ವಿಭಾಗ ಹಾಗೂ ವಿವಿಧ ರಾಷ್ಟ್ರೀಯ ಸಂಟನೆಗಳ ಸಹಕಾರದಲ್ಲಿ ಶನಿವಾರ (ಆ.29) ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಬಿಜೆಪಿ ಸರ್ಕಾರವು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಖೇಲೋ ಇಂಡಿಯಾ ಮೂಲಕ ದೇಶದ ಮೂಲೆ ಮೂಲೆಯಲ್ಲಿರುವ ಕ್ರೀಡಾಪಟುಗಳನ್ನು ಗುರುತಿಸಿ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಖೇಲೆಗಾ ಭಾರತ್-ಜೀತೇಗಾ ಭಾರತ್, ಏಕ್ ಘಂಟ್ ಖೇಲ್ ಕೇ ಮೈದಾನ್ಮೆ ಕಾರ್ಯಕ್ರಮವು ವಿದ್ಯಾರ್ಥಿಗಳ ಶಿಕ್ಷಣದೊಂದಿಗೆ ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಪ್ರತಿದಿನ ಒಂದುತಾಸು ಕ್ರೀಡೆಗಾಗಿ ಸಮಯ ಮೀಸಲಿಡಬೇಕು ಎಂದು ವಿದ್ಯಾರ್ಥಿಗಳಿಗೆ ಯಶ್ಪಾಲ್ ಸಲಹೆ ನೀಡಿದರು.
ಕಾಲೇಜ್ನ ಪ್ರಾಂಶುಪಾಲ ನಿತ್ಯಾನಂದ್ ವಿ. ಗಾಂವ್ಕರ್, ಫಿಟ್ ಇಂಡಿಯಾ ಪ್ರತಿಜ್ಞಾವಿಧಿ ಬೋಧಿಸಿದರು.
ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಗಣನಾಥ್ ಶೆಟ್ಟಿ, ಕುಂದಾಪುರ ತಾಲೂಕು ಅಧ್ಯಕ್ಷ ಡಾ.ಜಯಕರ್ ಶೆಟ್ಟಿ, ಜಿಲ್ಲಾ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡೆಂಟ್ ರಾಜೇಶ್ ಕೆ.ಸಿ., ಹೋಂ ಗಾರ್ಡ್ಸ್ ಇನ್ಸ್ಪೆಕ್ಟರ್ ಬಸವರಾಜ್, ರೆಡ್ಕ್ರಾಸ್ ಖಜಾಂಜಿ ಶಿವರಾಂ ಶೆಟ್ಟಿ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಶಾಲಿನಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀದೇವಿ ಉಪಸ್ಥಿತರಿದ್ದರು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಶೆಟ್ಟಿ ಸ್ವಾಗತಿಸಿದರು. ರೋವರ್ಸ್ ಆ್ಯಂಡ್ ರೇಂಜರ್ಸ್ನ ಸಂಚಾಲಕ ಮೆರ್ವಿನ್ ವಿಕ್ಟರ್ ಡಿಸೋಜ ವಂದಿಸಿದರು. ಎನ್ಎಸ್ಎಸ್ ಅಧಿಕಾರಿ ಬಾಲರಾಜ್ ಡಿ.ಬಿ. ನಿರೂಪಿಸಿದರು.