ಸಮಾರೋಪ ಸಮಾರಂಭದಲ್ಲಿ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಸನ್ಮಾನಿಸಲಾಯಿತು.
ಉಡುಪಿ: ಕಾನೂನು ಪದವಿ ಮುಗಿಸಿ ಕಾಲೇಜಿನಿಂದ ಹೊರಬಂದ ತಕ್ಷಣ ಓದು ಮುಗಿಯಿತು ಎಂದು ಭಾವಿಸಬಾರದು. ವಾಸ್ತವದಲ್ಲಿ ಅಸಲಿ ಪಯಣ ಮತ್ತು ಕಲಿಕೆ ಆರಂಭವಾಗುವುದೇ ಕಾಲೇಜು ಜೀವನದ ನಂತರ. ವಕೀಲಿಕೆ ಜೀವನ ಪರ್ಯಂತ ಕಲಿಯುವಂತಹ ವೃತ್ತಿಯಾಗಿದೆ. ಕಾಲೇಜಿನಲ್ಲಿ ಕೇವಲ ಕಾನೂನಿನ ಜ್ಞಾನ ಪಡೆಯಬಹುದು. ಆದರೆ ಕಾನೂನುಗಳ ನೈಜ ಅರ್ಥಗಳನ್ನು ನ್ಯಾಯಾಲಯ ಕಲಾಪಗಳ ಮೂಲಕವೇ ಕಲಿಯಬೇಕಿದೆ. ಹೀಗಾಗಿ ನ್ಯಾಯಾಲಯವೇ ದೊಡ್ಡ ಪಾಠಶಾಲೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅಭಿಪ್ರಾಯಪಟ್ಟರು.
ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ಅಡ್ವೊಕೇಟ್ ಪಿ. ಶಿವಾಜಿ ಶೆಟ್ಟಿ ಸ್ಮಾರಕ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಎಲ್ಲಾ ಕ್ಷೇತ್ರಗಳಲ್ಲಿಯೂ ಕಾನೂನು ಪದವಿಧರರಿಗೆ ಬೇಡಿಕೆಗಳಿದ್ದು, ಕಾರ್ಪೊರೇಟ್ ಕಂಪೆನಿಗಳು, ಬ್ಯಾಂಕ್ಗಳು ಕಾನೂನು ಸಲಹೆಗಾರರನ್ನು ನೇಮಿಸಿಕೊಳ್ಳುತ್ತಿವೆ. ಕಾನೂನು ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಈ ಬಗ್ಗೆಯೂ ಗಮನಹರಿಸಬೇಕು. ಜೊತೆಗೆ ಎಐ ಸಹಿತ ನವೀನ ತಂತ್ರಜ್ಞಾನಗಳು ಕೋರ್ಟ್ ಒಳಗೆ ಕಾಲಿಡುತ್ತಿದೆ. ಯುವ ವಕೀಲರು ಈ ಎಲ್ಲಾ ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದರು.
ದೆಹಲಿಯ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ನ್ಯಾಯಾಂಗ ಸದಸ್ಯ ಯೋಗೇಶ್ ಕುಮಾರ್ ಯು.ಎಸ್., ಬೆಂಗಳೂರಿನ ಕಿಲ್ಪಾರ್ ಸಂಸ್ಥೆಯ ನಿರ್ದೇಶಕ ಡಾ. ಚಿದಾನಂದ ರೆಡ್ಡಿ ಎಸ್. ಪಾಟೀಲ್, ಕಾಲೇಜಿನ ಪ್ರಾಂಶುಪಾಲೆ ಸುರೇಖಾ ಕೆ., ಜಯಂತಿ ಶಿವಾಜಿ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹ್ಯುಮಾನಿಟೀಸ್ ವಿಭಾಗದ ಮುಖ್ಯಸ್ಥ ಪ್ರೊ. ರೋಹಿತ್ ಎಸ್. ಅಮಿನ್ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಅಮೋಘ ಗಡ್ಕರ್ ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ವೆುಧಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಅಪರ್ಣಾಲಕ್ಷಿ ಶಾನಭಾಗ್ ಸ್ವಾಗತಿಸಿದರು. ವಾಸುದೇವ ತಿಲಕ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಪ್ರೀತಿ ಹರೀಶ್ ರಾಜ್ ವಂದಿಸಿದರು.
ಸ್ಪರ್ಧೆಯಲ್ಲಿ ಬೆಂಗಳೂರು ಬಿಎಂಎಸ್ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡ ಪ್ರಥಮ ಬಹುಮಾನ ಪಡೆದಿದ್ದು, 20 ಸಾವಿರ ರೂ. ನಗದು, ಲಕ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಕೆಎಲ್ಇ ಕಾನೂನು ಮಹಾವಿದ್ಯಾಲಯ 10 ಸಾವಿರ ರೂ. ನಗದು ಹಾಗೂ ಲಕದೊಂದಿಗೆ ದ್ವೀತಿಯ ಸ್ಥಾನ ಗಳಿಸಿದೆ.