ಮುಚ್ಚೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತವಾಗಿದೆ.  
ಉಡುಪಿ

ಮುಚ್ಚೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತ

ಗುರುಪುರ: ಚತುಷ್ಪಥ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 169ರ ಮುಚ್ಚೂರು ಕ್ರಾಸ್ ಹಾಗೂ ಎಡಪದವು ಬೈಪಾಸ್ ರಸ್ತೆಯ ಸಮೀಪದಲ್ಲಿ ಹೆದ್ದಾರಿಯ ಒಂದು ಭಾಗ ಬುಧವಾರ ಕುಸಿದಿದ್ದು, ಇನ್ನಷ್ಟು ಕುಸಿಯು ಸಾಧ್ಯತೆ ಕಂಡುಬಂದಿದೆ.
ಇಲ್ಲಿ ನಡೆದಿರುವ ಅವೈಜ್ಞಾನಿಕ ಮೋರಿ ರಚನೆ ಕಾಮಗಾರಿಯಿಂದ ಈ ದುರಂತ ಸಂಭವಿಸಿದ ಎಂದು ಸ್ಥಳೀಯರು ದೂರಿದ್ದಾರೆ.
ಮೋರಿಯೊಳಗೆ ತುಂಬಿರುವ ಮಣ್ಣು ತೆರವುಗೊಳಿಸಲು ದುರಸ್ತಿ ಕಾಮಗಾರಿ ನಡೆಯುತ್ತಿದ್ದಾಗ ಹೆದ್ದಾರಿಯ ಒಂದು ಭಾಗ ಕುಸಿದಿದೆ. ಇಲ್ಲಿ ಈಗ ಭಾರಿ ಪ್ರಮಾಣದಲ್ಲಿ ನೀರು ತುಂಬಿದೆ.
ಕೆಸರು ನೀರಿನಿಂದ ಅಶ್ವಿನ್ ನಾಯಕ್ ಎಂಬುವರ ತೋಟಕ್ಕೆ ಹಾನಿಯುಂಟಾಗಿದೆ. ರಸ್ತೆಯ ಮತ್ತೊಂದು ಪಾರ್ಶ್ವದಲ್ಲಿರುವ ಅಡಿಕೆ ತೋಟ, ಮನೆಗಳತ್ತ ಕೆಸರು ನೀರು ಪ್ರವೇಶಿಸಿದೆ. ತೋಟಕ್ಕೆ ನೀರು ಬಳಕೆ ಮಾಡುತ್ತಿದ್ದ ಕೆರೆಯಲ್ಲಿ ಮಣ್ಣು ತುಂಬಿ ಉಪಯೋಗಕ್ಕೆ ಬಾರದಂತಾಗಿದೆ.
ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಇಲ್ಲಿ ವಾಹನ ಸಂಚಾರ ನಿಷೇಧಿಸಿ ಬೈಪಾಸ್ ಮೂಲಕ ಎಡಪದವು- ಮೂಡುಬಿದಿರೆಗೆ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಹೆದ್ದಾರಿಯ ಅಡಿಭಾಗದಲ್ಲಿ ಒಂದು ಪಾರ್ಶ್ವದಿಂದ ಮತ್ತೊಂದು ಪಾರ್ಶ್ವಕ್ಕೆ ಮಳೆ ನೀರು ಮತ್ತು ಗುಡ್ಡದ ನೀರು ಹರಿದು ಹೋಗಲು ಮೋರಿ ನಿರ್ಮಿಸಲಾಗಿದೆ. ಮೋರಿಯ ಎರಡೂ ಕಡೆ ಮಣ್ಣು ತುಂಬಿದ್ದು, ಎರಡೂ ಪಾರ್ಶ್ವ ಕೆರೆಯಂತಾಗಿದೆ. ಇದರಿಂದ ಮಣ್ಣು ಶಿಥಿಲಗೊಂಡು ಹೆದ್ದಾರಿ ಕುಸಿಯಲಾರಂಭಿಸಿದೆ.
ಬುಧವಾರ ಸಂಜೆ ಮಂಗಳೂರು ತಹಸೀಲ್ದಾರ್ ರಮೇಶ್ ಬಾಬು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ‘ಹೆದ್ದಾರಿ ವಿಸ್ತರಣೆಗಾಗಿ ಸ್ವಾಧೀನಪಡಿಸಲಾದ ಹೆದ್ದಾರಿಯ ಎರಡೂ ಬದಿಯಲ್ಲಿ ಮಳೆ ನೀರು ಕೆಳಮುಖ ಹರಿದು ಹೋಗಲು 10 ಅಡಿ ಅಗಲ ಮತ್ತು 20 ಅಡಿ ಆಳಕ್ಕೆ ಓಪನ್ ಚರಂಡಿ ನಿರ್ಮಿಸಬೇಕು. ನಾಳೆಯೊಳಗೆ ಈ ಕೆಲಸ ಪೂರ್ಣಗೊಳಿಸಬೇಕು ಎಂದು ಎನ್‌ಎಚ್ ಪ್ರಾಜೆಕ್ಟ್ ಮ್ಯಾನೇಜರ್ ಜಾವೇದ್ ಆಜ್ಮಿ ಅವರಿಗೆ ಸೂಚಿಸಿದರು.