ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರದೀಪ್ ಚಂದ್ರ ಕುತ್ಪಾಡಿ ಮಾತನಾಡಿದರು. ಭೋಜ ಯು., ಗಿರೀಶ್ ತಂತ್ರಿ ಇದ್ದರು.
* ರಂಗಭೂಮಿ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಮಾಹಿತಿ
* 'ವಂದೇ ಮಾತರಂ'ನ 150ನೇ ವರ್ಷದ ಸಂಭ್ರಮಾಚರಣೆ
ಉಡುಪಿ: ರಾಷ್ಟ್ರೀಯ ಗೀತೆ 'ವಂದೇ ಮಾತರಂ'ನ 150ನೇ ವರ್ಷದ ಸಂಭ್ರಮಾಚರಣೆ ಹಾಗೂ ಕವಿ ಚಕ್ರವರ್ತಿ ಕಾಳಿದಾಸ ಜಯಂತಿ ನಿಮಿತ್ತ ರಾಷ್ಟ್ರಾದ್ಯಂತ ಏಕಕಾಲದಲ್ಲಿ ಜು.15ರಂದು 'ರಾಷ್ಟ್ರೀಯ ನಾಟಕೋತ್ಸವ ಆಯೋಜಿಸಲಾಗಿದೆ. ಉಡುಪಿಯಲ್ಲಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಸಂಜೆ 5:30ಕ್ಕೆ ರಂಗಭೂಮಿ ಉಡುಪಿ ವತಿಯಿಂದ ಪವನ್ ಕಿರಣ್ ಕೆರೆ ರಚನೆಯ 'ಸ್ವಾತಂತ್ರ್ಯ ಶರಧಿ' ನಾಟಕ ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾಭವನದಲ್ಲಿ ಸೋಮವಾರ (ಜು.13) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಎಲ್ಲ ಶಾಸಕರು, ವಿಪ ಸದಸ್ಯರು, ಜಿಲ್ಲಾಧಿಕಾರಿ ಸ್ವರೂಪಾ, ಎಸ್ಪಿ ಹರಿರಾಮ್ ಶಂಕರ್, ಮಾಹೆ ಸಹಕುಲಾಧಿಪತಿ ಡಾ, ಎಚ್.ಎಸ್. ಬಲ್ಲಾಳ್, ರಂಗಭೂಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ್ ಶೆಟ್ಟಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.
ರಾಜ್ಯದಲ್ಲಿ 20 ಲಕ್ಷಕ್ಕೂ ಅಧಿಕ ಪ್ರೇಕ್ಷಕರನ್ನು ಈ ನಾಟಕ ತಲುಪುವಂತಾಗಲು ರೂಪುರೇಷೆ ಸಜ್ಜುಗೊಳಿಸಲಾಗಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಲಿಂಕ್ ಮೂಲಕ ನಾಟಕೋತ್ಸವಗಳ ನೇರ ಪ್ರಸಾರ ದೇಶಾದ್ಯಂತ ನಡೆಯಲಿದೆ. ರಾಷ್ಟ್ರಪ್ರೇಮದ ಪ್ರತೀಕವಾದ ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಜನರು ಪಾಲ್ಗೊಂಡು ಸಹಕರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ರಂಗಭೂಮಿಯ ಕೋಶಾಧಿಕಾರಿ ಭೋಜ ಯು., ಆಡಳಿತ ಮಂಡಳಿ ಸದಸ್ಯ ಗಿರೀಶ್ ತಂತ್ರಿ ಇದ್ದರು.
ದೇಶದ 150 ಕಡೆಗಳಲ್ಲಿ ನಾಟಕ ಪ್ರದರ್ಶನ
ಕೇಂದ್ರ ಸರ್ಕಾರ ಅಧೀನದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ವತಿಯಿಂದ ದೇಶಾದ್ಯಂತ 150 ಕಡೆಗಳಲ್ಲಿ ರಂಗ ಪ್ರಯೋಗ ನಡೆಯಲಿದ್ದು, 4 ಸಾವಿರಕ್ಕೂ ಅಧಿಕ ಕಲಾವಿದರು ಪಾಲ್ಗೊಳ್ಳಲಿದ್ದಾರೆ. 39ಕ್ಕೂ ಅಧಿಕ ಭಾಷೆ ಹಾಗೂ ಉಪ ಭಾಷೆಗಳಲ್ಲಿ ನಾಟಕೋತ್ಸವ ನಡೆಯಲಿದೆ. ರಾಜ್ಯದಲ್ಲಿ ಬೆಂಗಳೂರು ಮತ್ತು ಉಡುಪಿಗೆ ಈ ಸದವಕಾಶ ಲಭಿಸಿದೆ. ಕರಾವಳಿ ಭಾಗದಲ್ಲಿ ಘಟಿಸಿದಂತಹ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಟನೆ ಆಧರಿಸಿ ಉಡುಪಿಯಲ್ಲಿ ಸೀಮಿತ ಅವಧಿಯಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.