ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಬಳಿ ನಾರಿ ಶಕ್ತಿ ಫೋರಂ ವತಿಯಿಂದ ಪ್ರತಿಭಟಿಸಲಾಯಿತು. ಸಂಧ್ಯಾ ರಮೇಶ್​, ಮಂಜುಳಾ ವಿಷ್ಣುಪ್ರಸಾದ್​, ಜ್ಯೋತಿ ಪೂಜಾರಿ, ಅನಿತಾ ಶ್ರೀಧರ್​, ನೀತಾ ಪ್ರಭು, ಶ್ಯಾಮಲಾ ಕುಂದರ್​, ಸೌರಭಿ ಪೈ ಇತರರಿದ್ದರು. 
ಉಡುಪಿ

ಕಾಂಗ್ರೆಸ್​ನಲ್ಲಿ ಇನ್ನೂ ಇದೆ ಬ್ರಿಟಿಷ್​ ದಾಸ್ಯತ್ವ

* ಸಂಧ್ಯಾ ರಮೇಶ್​ ಆರೋಪ

* ನಾರಿ ಶಕ್ತಿ ವಂದನಾ ಅಧಿನಿಯಮ ಪರ ಜನಾಕ್ರೋಶ ಪ್ರತಿಭಟನೆ

ಉಡುಪಿ: ದೇಶದ ಸನಾತನ ಸಂಸ್ಕೃತಿಗೆ ಮಹಿಳೆಯರೇ ಆಧಾರವಾಗಿದ್ದು, ಗಟ್ಟಿಬೇರು ಆಗಿದ್ದಾರೆ. ದೇಶದಲ್ಲಿ ಹರಿಯುವ ನದಿಗಳಿಗೂ ಸಹ ಮಹಿಳೆಯರ ಹೆಸರು ಇಡಲಾಗಿದೆ. ಹೆಣ್ಣಿಗೆ ಪೂಜನೀಯ ಸ್ಥಾನವನ್ನೂ ಕೊಟ್ಟ ಹೆಗ್ಗಳಿಕೆ ಭಾರತಕ್ಕಿದೆ. ಹೀಗಾಗಿ ಹೆಣ್ಣಿಗೂ ಮೀಸಲಾತಿ ಬೇಕೇಬೇಕು. ಕಾಂಗ್ರೆಸಿಗರು ಇನ್ನೂ ಬ್ರಿಟಿಷರ ದಾಸ್ಯತ್ವ ಪಾಲಿಸುತ್ತಿದ್ದಾರೆ. ಅವರ ಪಕ್ಷದಲ್ಲಿರುವ ಮಹಿಳೆಯರು ದಾಸ್ಯತ್ವದ ರಾಜಕಾರಣ ಬಿಟ್ಟು ನಮ್ಮ ಜತೆ ಕೈ ಜೋಡಿಸಲಿ ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್​ ಆಗ್ರಹಿಸಿದರು.
ನಾರಿ ಶಕ್ತಿ ವಂದನಾ ಅಧಿನಿಯಮ (ಮಹಿಳಾ ಮೀಸಲಾತಿ ಮಸೂದೆ) ಜಾರಿಯಾಗದಂತೆ ಕಾಂಗ್ರೆಸ್​ ಹಾಗೂ ಅವರ ಮಿತ್ರಪಕ್ಷಗಳು ತಡೆದಿವೆ ಎಂದು ಆರೋಪಿಸಿ ನಾರಿ ಶಕ್ತಿ ಫೋರಂ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಬಳಿ ಶನಿವಾರ (ಏ.25) ಆಯೋಜಿಸಿದ್ದ 'ಜನಾಕ್ರೋಶ' ಪ್ರತಿಭಟನೆಯಲ್ಲಿ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷೆ ಜ್ಯೋತಿ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಅನಿತಾ ಶ್ರೀಧರ್​, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು, ಬೈಂದೂರು ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ಯಾಮಲಾ ಕುಂದರ್​, ಕುಂದಾಪುರ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ, ನಗರಸಭಾ ಮಾಜಿ ಅಧ್ಯಕ್ಷೆ ಸುಮಿತ್ರಾ ನಾಯಕ್​, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಶೆಟ್ಟಿ, ಪ್ರಭಾಕರ್​ ಪೂಜಾರಿ ಹಾಗೂ ಬಿಜೆಪಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
"

ರಾಣಿ ಅಬ್ಬಕ್ಕ, ಅಹಲ್ಯಾಬಾಯಿ ಹೋಳ್ಕರ್​, ಬೆಳವಾಡಿ ಮಲ್ಲಮ್ಮ, ಕಿತ್ತೂರು ರಾಣಿ ಚನ್ನಮ್ಮ ದೇಶಕ್ಕಾಗಿ ಹೋರಾಡಿದ ದಿಟ್ಟ ಮಹಿಳೆಯರಾಗಿದ್ದಾರೆ. ಈಗಲೂ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದರೂ ಕಾಂಗ್ರೆಸ್​ನವರ ಹೀನ ಮನಸ್ಥಿಯಿಂದ ಉನ್ನತ ಅಧಿಕಾರ ಪಡೆಯುವ ಅವಕಾಶ ಲಭಿಸುತ್ತಿಲ್ಲ. ಕಾಂಗ್ರೆಸಿಗರು ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಹೆಸರಿನಲ್ಲಿ ಮತ ಕೇಳುತ್ತಾರೆಯೇ ಹೊರತು ಉಳಿದ ಮಹಿಳೆಯರು ಬೆಳೆಯಲು ಅವಕಾಶ ನೀಡುತ್ತಿಲ್ಲ. ಕಾಂಗ್ರೆಸ್ಸಿನಲ್ಲಿರುವ ಮಹಿಳೆಯರು ಗುಲಾಮಗಿರಿಯಲ್ಲಿದ್ದಾರೆ.