ಶ್ರೀ ಸಿದ್ಧಿವಿನಾಯಕ, ಲಕ್ಷ್ಮೀವೆಂಕಟರಮಣ, ಭಕ್ತ ಆಂಜನೇಯ ದೇವರು.
ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ನಂಚಾರು ಶ್ರೀ ಸಿದ್ಧಿವಿನಾಯಕ ಲಕ್ಷ್ಮೀವೆಂಕಟರಮಣ ಭಕ್ತ ಆಂಜನೇಯ ದೇವಸ್ಥಾನದಲ್ಲಿ ಫೆ.24ರಂದು ವರ್ಧಂತ್ಯುತ್ಸವ ಹಾಗೂ ಮಹಾ ಅನ್ನಸಂತರ್ಪಣೆ ಜರುಗಲಿದೆ.
ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಅಡಿಗರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಬೆಳಗ್ಗೆ ನವಕ ಪ್ರಧಾನ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ ಹಾಲಿಟ್ಟು ಸೇವೆ, ರಂಗಪೂಜೆ, ಢಮರು ಸೇವೆ, ರಾತ್ರಿ ತೆಕ್ಕಟ್ಟೆ ಕನ್ನುಕೆರೆ ಓಂಕಾರ ಕಲಾವಿದರಿಂದ ‘ಕಥೆ ಈಗ ಶುರು’ ನಾಟಕ ಜರುಗಲಿದೆ.
ದೇವಸ್ಥಾನ ಹಿನ್ನೆಲೆ
ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಪಂ ವ್ಯಾಪ್ತಿಯ ನಂಚಾರು ಗ್ರಾಮದ ಈ ದೇವಾಲಯ ಗ್ರಾಮ ದೇವರಾಗಿ ಶ್ರೀ ಸಿದ್ಧಿವಿನಾಯಕ ಲಕ್ಷ್ಮೀ ವೆಂಕಟರಮಣ, ಭಕ್ತ ಆಂಜನೇಯ ಮತ್ತು ಗಣಪತಿ ದೇವರ ದೇಗುಲಗಳಿವೆ. 450 ವರ್ಷಗಳ ಹಿಂದೆ ವೆಂಕಟರಮಣ ದೇವರನ್ನು ತಿರುಪತಿ ಕ್ಷೇತ್ರದಿಂದ ಚಕ್ಕೇರ ಮನೆತನದವರು ಈ ಜಾಗಕ್ಕೆ ತಂದು ಪ್ರತಿಷ್ಠಾಪನೆ ಮಾಡಿದ್ದರು. 1989ರಲ್ಲಿ ದೇವಸ್ಥಾನಕ್ಕೆ ಗರ್ಭಗುಡಿಗೆ ತಾಮ್ರದ ಹೊದಿಕೆಯನ್ನು ದಾನಿಗಳ, ಭಕ್ತರ ಸಹಕಾರದಿಂದ ನಿರ್ಮಿಸಲಾಯಿತು. 2017ರಲ್ಲಿ ಮಠದ ಹಕ್ಲು ಎಂಬಲ್ಲಿನ ಗಣಪತಿಯನ್ನು ತಂದು ಪ್ರತಿಷ್ಠಾಪನೆ ಮಾಡಲಾಗಿತ್ತು.
ದೇವಸ್ಥಾನಕ್ಕೆ ಸಂಬಂಧಿಸಿ ಬ್ರಹ್ಮದೇವರ ಸಪರಿವಾರ ದೇವರ ದೇವಸ್ಥಾನ ಇದ್ದು, ಪೂಜೆ ನಡೆಯುತ್ತಿದೆ. ಶ್ರೀ ಕ್ಷೇತ್ರ ಸೀತಾನದಿಯ ತಟದಲ್ಲಿದ್ದು ಭಕ್ತರಿಗೆ ಇಂಬು ಕೊಡುವ ಧಾರ್ಮಿಕ ಕ್ಷೇತ್ರವಾಗಿ, ಗ್ರಾಮದೇವರಾಗಿ ಪ್ರಸಿದ್ಧಿಯಾಗಿದೆ. ದೀಪೋತ್ಸವ, ವರ್ಧಂತ್ಯುತ್ಸವ, ಮಾರಿ ಪೂಜೆ, ಚೌತಿ ಸಂದರ್ಭದಲ್ಲಿ ಗಣಪತಿ ಹೋಮ, ಹನುಮ ಜಯಂತಿ ದಿವಸ ಉತ್ಸವ, ರಂಗಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಜರುಗುತ್ತವೆ.
ದೇವಸ್ಥಾನಕ್ಕೆ ಸಮುದಾಯ ಭವನದ ಅಗತ್ಯ ಇದ್ದು, ಈ ಕುರಿತು ಈಗಾಗಲೇ ಶಾಸಕರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ. 25 ಲಕ್ಷ ರೂ. ವೆಚ್ಚ ತಗುಲಲಿದ್ದು, ಶೀಘ್ರದಲ್ಲಿ ನಿರ್ಮಾಣವಾದರೆ ಎಲ್ಲ ಸಮುದಾಯದವರಿಗೆ ಶುಭ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತಿತ್ತು.
ಶ್ರೀ ಸಿದ್ಧಿವಿನಾಯಕ, ಲಕ್ಷ್ಮೀವೆಂಕಟರಮಣ, ಭಕ್ತ ಆಂಜನೇಯ ದೇವರು.
**************************