ರುಕ್ಮಯ ಮೂಲ್ಯ ದಂಪತಿಗೆ ನಿರ್ಮಿಸಲಾದ ನೂತನ ಮನೆ ‘ನಮೋ ಕುಟೀರ’.
ಉಳ್ಳಾಲ: ಬಡತನದ ಬೇಗೆಯಲ್ಲಿ ಬೆಂದು, ಜೀವನದ ಸಂಧ್ಯಾಕಾಲದಲ್ಲಿ ತಲೆಗೊಂದು ಸೂರು ಇಲ್ಲದೆ ಕಂಗಾಲಾಗಿದ್ದ ವೃದ್ಧ ದಂಪತಿಯ ಪಾಲಿಗೆ ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಆಶಾಕಿರಣವಾಗಿ ಮೂಡಿಬಂದಿದ್ದಾರೆ.
ಜೀವನದ ಸಂಧ್ಯಾಕಾಲದಲ್ಲಿ ತಲೆಯ ಮೇಲೊಂದು ಸುಭದ್ರವಾದ ಛಾವಣಿ ಇರಬೇಕೆಂಬ ಕುರ್ನಾಡು ಗ್ರಾಪಂ ವ್ಯಾಪ್ತಿಯ ಅಬೆಮಾರ್ ನಿವಾಸಿಗಳಾದ 80 ವರ್ಷ ದಾಟಿದ ರುಕ್ಮಯ ಮೂಲ್ಯ ಹಾಗೂ ವಿಜಯ ದಂಪತಿಯ ಆಸೆ ಕೊನೆಗೂ ಈಡೇರುತ್ತಿದೆ. ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈಯವರು ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಟ್ಟಿರುವ ನಮೋ ಕುಟೀರ ಸಜ್ಜಾಗಿದ್ದು, ಫೆಬ್ರವರಿ 25ರಂದು ಗೃಹ ಪ್ರವೇಶ ನಡೆಯಲಿದೆ.
ದಯನೀಯ ಸ್ಥಿತಿಯಲ್ಲಿದ್ದ ಬದುಕು
ಮಕ್ಕಳಿಲ್ಲದ ಈ ವೃದ್ಧ ದಂಪತಿ ಹಲವು ವರ್ಷಗಳಿಂದ ಕುಟುಂಬದ ಜಾಗದಲ್ಲಿದ್ದ ಕೋಳಿಗೂಡಿನಂತಹ ಮನೆಯಲ್ಲಿ ವಾಸವಿದ್ದರು. ಶೌಚಗೃಹದ ವ್ಯವಸ್ಥೆಯೂ ಇಲ್ಲದ, ಇಂದೋ ನಾಳೆಯೋ ಬೀಳುವಂತಿದ್ದ ಈ ಮನೆಯಲ್ಲೇ ದಯನೀಯ ಬದುಕು ಸಾಗಿಸುತ್ತಿದ್ದರು. ಕಳೆದ ಮಳೆಗಾಲದಲ್ಲಿ ಮನೆಯ ಹಿಂಬದಿಯ ಗೋಡೆ ಕುಸಿದು ನೀರು ಒಳಬಂದಾಗ ವಾಸ ಮಾಡುವುದು ಅಸಾಧ್ಯವಾಗಿತ್ತು. ದಿನದ ಆಹಾರಕ್ಕೂ ಕಷ್ಟಪಡುತ್ತಿದ್ದ ಇವರಿಗೆ ಸ್ವಂತ ಮನೆಯೆನ್ನುವುದು ಗಗನಕುಸುಮವಾಗಿತ್ತು.
ಸಂಕಷ್ಟದ ಬದುಕು
ದಂಪತಿಯ ಸಂಕಷ್ಟದ ಬಗ್ಗೆ ಮಾಹಿತಿ ತಿಳಿದ ಸಂತೋಷ್ ಕುಮಾರ್ ರೈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಹಿಂದೆ ಆರ್ಥಿಕವಾಗಿ ಹಿಂದುಳಿದ ಐದು ಕುಟುಂಬಗಳಿಗೆ ಪ್ರಧಾನಿ ಮೋದಿ ಹೆಸರಲ್ಲಿ ‘ನಮೋ ಕುಟೀರ’ ನಿರ್ಮಿಸಿಕೊಟ್ಟಿದ್ದ ಅವರು, ಈ ದಂಪತಿಗೂ ಹೊಸ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು. ಅದರಂತೆ ಕಳೆದ ನವೆಂಬರ್‌ನಲ್ಲಿ ಭೂಮಿಪೂಜೆ ನೆರವೇರಿಸಿ, ಈಗ ಸುಂದರ ನಿರ್ಮಿಸಿದ್ದಾರೆ. ಇದು ಇವರು ನಿರ್ಮಿಸಿದ 6ನೇ ನಮೋ ಕುಟೀರ. ಈ ನೂತನ ಮನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಫೆ.25ರಂದು ಗೃಹಪ್ರವೇಶ ನಡೆಯಲಿದೆ.
ಈಗಾಗಲೇ ಅತ್ಯಗತ್ಯ ಉಳ್ಳವರಿಗೆ ಐದು ಕುಟುಂಬಗಳಿಗೆ ಐದು ಮನೆಗಳನ್ನು ನಿರ್ಮಿಸಲಾಗಿದ್ದು, ಇದು ಆರನೇ ಮನೆಯಾಗಿದೆ. ಏಳನೇ ಮನೆ ಅಡ್ಕದಲ್ಲಿ ನಿರ್ಮಾಣ ಹಂತದಲ್ಲಿದೆ. ಹಲವರು ಮನವಿ ಸಲ್ಲಿಸಿದ್ದರೂ ಎಂಟನೇ ಮನೆ ತನ್ನ ಜತೆಗಿರುವ ರಾಜೇಶ್ ಮಡಿವಾಳ್ ಎಂಬುವರಿಗೆ ನಿರ್ಮಿಸಲು ತೀರ್ಮಾನಿಸಲಾಗಿದೆ.
ನಮಗೆ ಕೆಲಸ ಮಾಡಲೂ ಆಗುತ್ತಿಲ್ಲ, ಹೀಗಿರುವಾಗ ಸ್ವಂತ ಮನೆ ನಿರ್ಮಿಸುವುದು ಸಾಧ್ಯವೇ ಇಲ್ಲ. ಈ ಬಗ್ಗೆ ಸಂತೋಷ್ ರೈ ಅವರಲ್ಲಿ ತಿಳಿಸಿದಾಗ ಎಲ್ಲಾ ಖರ್ಚಿನಲ್ಲಿ ಮನೆ ನಿರ್ಮಿಸಿದ್ದಾರೆ.