ನಮ್ಮ ಉಡುಪಿ ಉತ್ಸವದಲ್ಲಿ ಗಮನ ಸೆಳೆಯುತ್ತಿರುವ ಯುರೋಪಿಯನ್​ ಪ್ಯಾಲೇಸ್​. 
ಉಡುಪಿ

ನಮ್ಮ ಉಡುಪಿ ಉತ್ಸವ... ಸಂಭ್ರಮಗಳ ಕಲರವ

* ಮುದ ನೀಡುತ್ತಿವೆ ವಿವಿಧ ಮನರಂಜನೆ

* ಯುರೋಪಿಯನ್​ ಪ್ಯಾಲೇಸ್​ ಆಕರ್ಷಣೆ

* ಪ್ರೀತಿ ತೋರುವ ಮತ್ಸ್ಯಕನ್ಯೆಯರು

* ಕಣ್ಮನ ಸೆಳೆವ ನಯಾಗರ ಫಾಲ್ಸ್ 

ಉಡುಪಿ: ಉಡುಪಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಕಾರದಿಂದ 'ನಮ್ಮ ಉಡುಪಿ ಉತ್ಸವ' ಎಂಬ ವಿಶಿಷ್ಟ ಪಾರ್ಕ್​ ಆರಂಭಗೊಂಡಿದ್ದು, ವಿವಿಧ ಮನರಂಜನೆ ಹಾಗೂ ಆಹಾರ ಮೇಳಗಳು ಕುಟುಂಬಗಳಿಗೆ ಮುದ ನೀಡುತ್ತಿವೆ. 
ಉಡುಪಿಯ ಕರಾವಳಿ ಜಂಕ್ಷನ್​ ಸಮೀಪ, ಶಾರದಾ ಹೋಟೆಲ್​ ಹಿಂಭಾಗದಲ್ಲಿ ಉತ್ಸವ ನಡೆಯುತ್ತಿದೆ. ದಿನವೂ ಸಾವಿರಾರು ಜನರು ಸಂಭ್ರಗಳ ಕಲರವದಲ್ಲಿ ತಲ್ಲೀನರಾಗುತ್ತಿದ್ದಾರೆ. ಮಕ್ಕಳಿಗಂತೂ ಹೊಸಲೋಕ ಪ್ರವೇಶಿಸಿದ ಅನುಭವವಾಗುತ್ತಿದ್ದು, ಹಿರಿಹಿರಿ ಹಿಗ್ಗುತ್ತಿದ್ದಾರೆ.

ಯುರೇಪಿಯನ್​ ಪ್ಯಾಲೇಸ್​

ಉಡುಪಿ ಉತ್ಸವದ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಯುರೋಪಿಯನ್​ ಪ್ಯಾಲೇಸ್​ನ ಮಾದರಿ ಮನ ಸೆಳೆಯುತ್ತದೆ. ಟಿಕೆಟ್​ ಪಡೆದು ಅರಮನೆಯ ದ್ವಾರದ ಮೂಲಕ ಒಳ ಸಾಗುತ್ತಿದ್ದಂತೆ ವಿದೇಶದ ಬೀದಿಯೊಳಗೆ ಸಾಗಿದ ಅನುಭವ ಆಗುತ್ತದೆ. ಎರಡೂ ಇಕ್ಕೆಲಗಳಲ್ಲಿ ಅಲ್ಲಲ್ಲಿ ವಿವಿಧ ಬಗೆಯ ಸುಖಾಸೀನ ಅಳವಡಿಸಲಾಗಿದ್ದು, ಕೆಲ ಕಾಲ ಅಲ್ಲಿ ಕುಳಿತು ರಾಜವೈಭವ ಕಣ್ತುಂಬಿಸಿಕೊಳ್ಳಬಹುದು. ಕುದುರೆಯ ಮೇಲೆ ಬರುತ್ತಿರುವ ರಾಜ, ಸೈನಿಕರು, ರಾಜ ದರ್ಬಾರ್​ ಇಲ್ಲಿವೆ.

ಮತ್ಸ್ಯಕನ್ಯೆಯರ ಪ್ರದರ್ಶನ

 ಅರಮನೆ ದಾಟಿ ಮುಂದಕ್ಕೆ ಸಾಗಿದರೆ ನೀರಿನೊಳಗೆ ಮತ್ಸ್ಯಕನ್ಯೆಯರ ಪ್ರದರ್ಶನವಿದೆ. 'ಮರ್ಮೇಡ್​ ಶೋ' ಹೆಸರಿನ ಈ ಪ್ರದರ್ಶನ ಉಡುಪಿಗೆ ಹೊಸ ಪರಿಚಯವಾಗಿದೆ. ಇಂಡೋನೇಶಿಯಾದ ಇಬ್ಬರು ಯುವತಿಯರು ಮೀನಿನಂತೆ ಪೋಷಾಕು ಧರಿಸಿ, ನೀರಿನೊಳಗೆ ಪಲ್ಟಿ ಹೊಡೆಯುತ್ತ, ಕೈಯಲ್ಲೇ ಹೃದಯದ ಚಿನ್ಹೆ ತೋರುತ್ತ ನೋಡುಗರಿಗೆ ಪ್ರೀತಿಯ ಸಂದೇಶ ನೀಡುತ್ತಾರೆ. 

ಅಮ್ಯೂಸ್​ಮೆಂಟ್​ ಪಾರ್ಕ್​

ಯುವ ಸಮುದಾಯಕ್ಕೆ ಖುಷಿ ಹೆಚ್ಚಿಸಲು ಅಮ್ಯೂಸ್​ಮೆಂಟ್​ ಪಾರ್ಕ್​ ಇದೆ. ಜಾಯಿಂಟ್​ ವ್ಹೀಲ್​, ಹೈಪಿಲ್​ ಟವರ್​, ಸುನಾಮಿ ರೈಡ್​, ಕೋಲಂಬಸ್​ ನೌಕೆ, ಡ್ರಾಗನ್​ ಟ್ರೇನ್​, ಮಕ್ಕಳಿಗಾಗಿ ವಿವಿಧ ಆಟಿಕೆಗಳು, ಸ್ಕ್ರೀನ್​ ಲೈಟ್​, ಕಪ್​ ಶುಗರ್​ ಬ್ರೇಕ್​ ಡಾನ್ಸ್​, ಸೋಯನಿಚಾರ್​ ಹೀಗೆ ಅನೇಕ ವೈವಿಧ್ಯತೆಗಳಿವೆ ಎನ್ನುತ್ತಾರೆ ಉತ್ಸವದ ಉಸ್ತುವಾರಿ ಬಷೀರ್​.

ಫಾಲ್ಸ್, ಭೂತದ ಮನೆ

ಉಡುಪಿ ಉತ್ಸವದಲ್ಲಿ ನಯಾಗರ ಫಾಲ್ಸ್​ನ ಮಾದರಿ ವಿಶೇಷ ಆಕರ್ಷಣೆಯಾಗಿದೆ. 180 ಅಡಿ ಅಗಲ, 30 ಅಡಿ ಎತ್ತರದ ಈ ಜಲಪಾತ ಸಂಜೆಯ ವೇಳೆ ಚಿತ್ತಾಕಾರದ ಲೈಟಿಂಗ್ಸ್​ನಲ್ಲಿ ಕಂಗೊಳಿಸುತ್ತಿದೆ. ಇದರ ಪಕ್ಕದಲ್ಲಿಯೇ 'ಭಯಾನಕ ಮನೆ' ಇದ್ದು ಭೂತಗಳ ಪ್ರದರ್ಶನವೂ ಇದೆ. ಅನಕೊಂಡ ಹಾವಿನ ತ್ರಿಡಿ ಶೋ ಇನ್ನೊಂದು ವಿಶೇಷತೆ. 150ಕ್ಕೂ ಅಧಿಕ ಸಿಬ್ಬಂದಿ ಇದ್ದು, ಯಶಸ್ವಿಯಾಗಿ ಉಡುಪಿ ಉತ್ಸವ ನಡೆಯುತ್ತಿದೆ ಎನ್ನುತ್ತಾರೆ ಉತ್ಸವದ ಇನ್ನೋರ್ವ ಉಸ್ತುವಾರಿ ಪ್ರಭಾಕರ್​.

ಆಧ್ಯಾತ್ಮಿಕ ಚಿತ್ರ ಪ್ರದರ್ಶನ

ಮನರಂಜನೆಯ ಆಹ್ಲಾದತೆಯೊಂದಿಗೆ ಹೊರ ಬಂದ ಬಳಿಕ ಉಚಿತವಾಗಿ ಆಧ್ಯಾತ್ಮಿಕ ಜ್ಞಾನವೂ ಲಭಿಸಲಿದೆ. ಉಡುಪಿ ಅಜ್ಜರಕಾಡಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ 'ಆಧ್ಯಾತ್ಮಿಕ ಚಿತ್ರ ಪ್ರದರ್ಶನ' ಆಯೋಜಿಸಲಾಗಿದೆ. ಆತ್ಮ-ಪರಮಾತ್ಮನ ಪರಿಚಯ, 4 ಯುಗದ ಹಾಗೂ ಮೂರು ಲೋಕಗಳ ಮಾಹಿತಿಯೂ ಲಭಿಸಲಿದೆ.

ಶಾಲಾ ಮಕ್ಕಳಿಗೆ ಶೇ.50 ರಿಯಾಯಿತಿ

 ಪ್ರತಿದಿನವೂ ಸಂಜೆ 4 ಗಂಟೆಗೆ ಉತ್ಸವ ಆರಂಭಗೊಳ್ಳಲಿದ್ದು ರಾತ್ರಿ 9:30ರ ವರೆಗೆ ನಡೆಯಲಿದೆ. 5 ವರ್ಷ ಮೇಲ್ಪಟ್ಟ ಎಲ್ಲರಿಗೂ 100 ರೂ. ಪ್ರವೇಶ ಶುಲ್ಕವಿದ್ದು, ಶಾಲೆಯ ಮಕ್ಕಳು ಶಿಕ್ಷಕರೊಂದಿಗೆ ತಂಡವಾಗಿ ಬಂದಲ್ಲಿ ಪ್ರವೇಶ ಶುಲ್ಕದಲ್ಲಿ ಶೇ.50 ರಿಯಾಯಿತಿ ಇದೆ. ಎಲ್ಲಬಗೆಯ ತಿಂಡಿ&ತಿನಿಸುಗಳ ಆಹಾರ ಮೇಳ, ಮನೆಗಳಿಗೆ ಬೇಕಾಗುವ ಎಲ್ಲ ಬಗೆಯ ಸಾಮಗ್ರಿ, ಮಹಿಳೆಯರಿಗಾಗಿ ಬ್ಯಾಂಗಲ್ಸ್​ ಹಾಗೂ ಫ್ಯಾನ್ಸಿ ಮಳಿಗೆ​ ಕೂಡ ಇದೆ. ಉಡುಪಿ ಹಾಗೂ ಜಿಲ್ಲೆಯ ಜನರಿಗಾಗಿಯೇ 'ನಮ್ಮ ಉಡುಪಿ ಉತ್ಸವ' ಆಯೋಜಿಸಿದ್ದು, ಜನವರಿ ತಿಂಗಳ ಪರ್ಯಂತ ಮುಂದುವರಿಯಲಿದೆ. ಕುಟುಂಬ ಸಮೇತರಾಗಿ ಬಂದು ಸಂಭ್ರಮಿಸಲು ಇದು ಸದವಕಾಶ ಎನ್ನುತ್ತಾರೆ ಉತ್ಸವದ ಸಂಯೋಜಕ ಮಾಸ್ತಿ ಚೈತನ್ಯ ಅಯ್ಯಂಗಾರ್​.