ಉಡುಪಿಯಲ್ಲಿ ನೆಂಪು ನರಸಿಂಹ ಭಟ್​ ಸಂಸ್ಮರಣಾರ್ಥ 'ನಭ' ಜೀವನ ಯಾನ ಕೃತಿ ಬಿಡುಗಡೆ ಮಾಡಲಾಯಿತು. ನೀಲಾವರ ಸುರೇಂದ್ರ ಅಡಿಗ, ಬೆಳಗೋಡು ರಮೇಶ್​ ಭಟ್​, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ನೆಂಪು ಶ್ರೀಧರ ಭಟ್​, ರಾಘವೇಂದ್ರ ಉಡುಪ, ಲಕ್ಷ್ಮೀ ಮಚ್ಚಿನ ಇದ್ದರು. 
ಉಡುಪಿ

ಬರೆದಂತೆಯೇ ಬದುಕಿದ್ದ ಸಾಹಿತಿ ನೆಂಪು ಭಟ್​

* ನೀಲಾವರ ಸುರೇಂದ್ರ ಅಡಿಗ ಸ್ಮರಣೆ

* 'ನಭ' ಜೀವನ ಯಾನ ಕೃತಿ ಬಿಡುಗಡೆ

ಉಡುಪಿ: ದಿ.ನೆಂಪು ನರಸಿಂಹ ಭಟ್​ ವಿಶೇಷ, ವಿಶಿಷ್ಟ ಸಾಹಿತಿ. 1980ರ ದಶಕದಲ್ಲಿಯೇ ನನಗೆ ಪರಿಚಯವಿದ್ದು ಹತ್ತಿರದಿಂದ ಅವರ ಜೀವನ ಕಂಡಿದ್ದೇನೆ. ಮಕ್ಕಳ ಸಾಹಿತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದರಲ್ಲದೆ, ಬರೆದಂತೆಯೇ ಬದುಕಿದ್ದರು. ಕೃತಿಗೂ ಹಾಗೂ ಅವರ ಜೀವನಕ್ಕೂ ಸಾಮ್ಯತೆ ಇತ್ತು. ಸಂಸಾರ, ಸಂಸ್ಕಾರ ಹಾಗೂ ಸಂಸ್ಕೃತಿ ಈ ಮೂರೂ ಸಹ ಅವರ ವ್ಯಕ್ತಿತ್ವದೊಳಗಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ (ಮಾ.28) ಸಂಜೆ ಆಯೋಜಿಸಿದ್ದ ದಿ.ನೆಂಪು ನರಸಿಂಹ ಭಟ್​ ಸಂಸ್ಮರಣೆ, 'ನಭ' ಜೀವನ ಯಾನ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಕಥೆಗಾರ ಬೆಳಗೋಡು ರಮೇಶ್​ ಭಟ್​ ಮಾತನಾಡಿ, ನೆಂಪು ನರಸಿಂಹ ಭಟ್​ ಅವರ ಜೀವನ, ಸಾಹಿತ್ಯ ಕೃಷಿಯ ಬಗ್ಗೆ ವಿವರಿಸಿದರು. 'ನಭ' ಕೃತಿಯ ಕುರಿತು ಲಕ್ಷ್ಮೀ ಮಚ್ಚಿನ ಮಾತನಾಡಿದರು. ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ನೆಂಪು ಶ್ರೀಧರ ಭಟ್​ ಉಪಸ್ಥಿತರಿದ್ದರು.
ಇಂದಿರಾ ಭಟ್​ ಮತ್ತು ಸಂಗಡಿಗರು ಪ್ರಾರ್ಥಿಸಿದರು. ರಾಘವೇಂದ್ರ ಉಡುಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಚಿತ್​ ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು. 
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್​ ವೀಡಿಯೋ ಸಂದೇಶ ನೀಡಿದರು. ನೆಂಪು ನರಸಿಂಹ ಭಟ್​ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.