ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ದೊರೆತ ಅಧಿಕೃತ ಪ್ರಮಾಣಪತ್ರ nI
ಉಡುಪಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರೀಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ 'ಸೌಖ್ಯವನ' ಘಟಕಕ್ಕೆ ಅತ್ಯುನ್ನತ ಗುಣಮಟ್ಟದ ಸೇವೆಯನ್ನು ಗುರುತಿಸಿ ಆಸ್ಪತ್ರೆಗಳ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಅಧಿಕೃತ ಪ್ರಮಾಣಪತ್ರ ದೊರೆತಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ವೈದ್ಯಾಧಿಕಾರಿ ಡಾ. ಗೋಪಾಲ್ ಪೂಜಾರಿ, 2007ರಲ್ಲಿ ಕೇವಲ 60 ಹಾಸಿಗೆಗಳೊಂದಿಗೆ ಆರಂಭಗೊಂಡ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ 2010ರಲ್ಲಿ 240 ಹಾಸಿಗೆಗಳಿಗೆ ಹಾಗೂ -21ರಲ್ಲಿ 320 ಹಾಸಿಗೆಗಳ ಸುಸಜ್ಜಿತ ಹಾಗೂ ಅತ್ಯಾಧುನಿಕ ಕೇಂದ್ರವಾಗಿ ವಿಸ್ತರಣೆಗೊಂಡಿದೆ. ಎನ್ಎಬಿಎಚ್ ಮಾನ್ಯತೆಗಾಗಿ 2023ರ ಆಗಸ್ಟ್ನಿಂದ ಸಿದ್ಧತೆಗಳು ನಡೆದಿದ್ದವು. ಚಿಕಿತ್ಸಾ ವಿಭಾಗ, ನೈರ್ಮಲ್ಯ, ಪಥ್ಯಾಹಾರ, ವಾಯು ಮಾಲಿನ್ಯ ನಿಯಂತ್ರಣ, ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ವಿಭಾಗಗಳ ಪರಿಶೀಲನೆಯ ಬಳಿಕ, 2026ರ ಮಾರ್ಚ್ 26 ಮತ್ತು 27ರಂದು ಎನ್ಎಬಿಎಚ್ ತಂಡದ ಡಾ. ಅಖಿಲೇಶ್, ಡಾ. ಜ್ಯೋತಿ ಹಾಗೂ ಡಾ. ನರೇಶ್ ಆಸ್ಪತ್ರೆಗೆ ಭೇಟಿ ನೀಡಿ ಕೂಲಂಕುಶ ಪರಿಶೀಲನೆ ನಡೆಸಿ ವರದಿ ನೀಡಿದ್ದರು. ಇದೀಗ ಎನ್ ಎ ಬಿ ಎಚ್ ಪ್ರಮಾಣಪತ್ರ ನೀಡಿದೆ ಎಂದರು.
ಸೌಖ್ಯವನದಲ್ಲಿ ನುರಿತ ವೈದ್ಯರ ಸಮಾಲೋಚನೆಯೊಂದಿಗೆ ಜಲ ಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಎಣ್ಣೆ ಮಾಲೀಶು, ಆಕ್ಯುಪಂಕ್ಚರ್ (ಸೂಜಿ ಚಿಕಿತ್ಸೆ), ಕಪ್ಪಿಂಗ್ ಥೆರಪಿ, ಫಿಸಿಯೋಥೆರಪಿ, ಯೋಗ ಚಿಕಿತ್ಸೆ ಹಾಗೂ ಪೌಷ್ಟಿಕಾಂಶಯುಕ್ತ ಸಾತ್ವಿಕ ಪಥ್ಯಾಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಹೊರರೋಗಿ ವಿಭಾಗದಲ್ಲೂ ಚಿಕಿತ್ಸೆ ಪಡೆಯಲು ಅವಕಾಶವಿದೆ. ಮಾನ್ಯತಾ ಮಂಡಳಿ ಪ್ರಮಾಣಪತ್ರದಿಂದ ಇನ್ನಷ್ಟು ಉತ್ತಮ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೌಖ್ಯವನದ ಸ್ಥಾನಿಕ ವೈದ್ಯಾಧಿಕಾರಿ ಡಾ. ಶೋಭಿತ್ ಶೆಟ್ಟಿ, ಮಹಿಳಾ ವೈದ್ಯಾಧಿಕಾರಿ ಡಾ. ಪೂಜಾ ಜಿ., ಫಿಸಿಯೋಥೆರಪಿಸ್ಟ್ ಡಾ. ಚೇತನಾ ಹಾಗೂ ವ್ಯವಸ್ಥಾಪಕ ಪ್ರವಿಣ್ ಕುಮಾರ್ ಉಪಸ್ಥಿತರಿದ್ದರು.