ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿದರು.
ಉಡುಪಿ:ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅತೀ ಅಗತ್ಯ. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಸ್ಪರ್ಧೆಗಳು ವೇದಿಕೆಯಾಗಿವೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹೇಳಿದರು.
ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಪ್ರಾಂಶುಪಾಲರ ಸಂಘ ಆಶ್ರಯದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಪೂರ್ಣಪ್ರಜ್ಞ ಮ್ಯಾನೇಜ್ಮೆಂಟ್ ಕಾಲೇಜು ನಿರ್ದೇಶಕ ಡಾ. ಶ್ರೀರಮಣ ಐತಾಳ್ ಮಾತನಾಡಿ, ಸೋಲು ಗೆಲುವುಗಳ ಬಗ್ಗೆ ಚಿಂತಿಸದೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಿಕೆ ಮುಖ್ಯ. ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಸ್ಪರ್ಧೆಗಳನ್ನು ಸವಾಲಾಗಿ ಸ್ವೀಕರಿಸಿದಾಗ ಗೆಲುವು ಸಾಧ್ಯವಿದೆ. ಪಿಯುಸಿ ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡಗಳ ಮಧ್ಯೆಯೂ ಸಾಂಸತಿಕ ಕಾರ್ಯಕ್ರಮಗಳತ್ತ ಗಮನಹರಿಸಿರುವುದು ಸಂತಸ ತಂದಿದೆ ಎಂದರು.
ಡಿಡಿಪಿಯು ಮಾರುತಿ ಅಧ್ಯಕ್ಷತೆ ವಹಿಸಿದ್ದರು. ಪೂರ್ಣಪ್ರಜ್ಞ ಕಾಲೇಜು ಪ್ರಾಂಶುಪಾಲ ಡಾ. ರಾಮು ಎಲ್., ಪ್ರಾಂಶುಪಾಲರ ಸಂದ ಅಧ್ಯಕ್ಷ ಮಂಜುನಾಥ ಭಟ್, ಡಾ. ದಯಾನಂದ ಪೈ, ಜಗದೀಶ್ ನಾವಡ, ಪುಂಡರೀಕಾಕ್ಷ ಕೊಡಂಚ ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಂತೋಷ್ ಕುಮಾರ್ ಸ್ವಾಗತಿಸಿದರು. ಸಾಂಸತಿಕ ಸ್ಪರ್ಧೆ ಸಂಯೋಜಕ ರಮಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು.