ಮುಹಮ್ಮದ್ ಪೈಗಂಬರ್ ಜನ್ಮದಿನದ ನಿಮಿತ್ತ ಉಡುಪಿಯ ದೊಡ್ಡಣಗುಡ್ಡೆಯಲ್ಲಿ ಮುಸ್ಲಿಮರು ಸಂಭ್ರಮದಿಂದ ಮಿಲಾದುನ್ನಬಿ ಮೆರವಣಿಗೆ ನಡೆಸಿದರು.
* ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನದ ಸಂಭ್ರಮ
* ಗಮನ ಸೆಳೆದ ಸಂದಲ್ ಮೆರವಣಿಗೆ, ದ್ ಕುಣಿತ
ಉಡುಪಿ: ಪ್ರವಾದಿ ಮುಹಮ್ಮದ್ (ಸ.ಅ.) ಪೈಗಂಬರ್ ಜನ್ಮದಿನದ ನಿಮಿತ್ತ ಮುಸ್ಲಿಂ ಸಮಾಜಿಗರು ಉಡುಪಿ ಜಿಲ್ಲಾದ್ಯಂತ ಮಿಲಾದುನ್ನಬಿಯನ್ನು ಮಂಗಳವಾರ (ಆ.25) ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದರು.
ಉಡುಪಿಯ ನೇಜಾರು, ದೊಡ್ಡಣಗುಡ್ಡೆ, ಸಂತೋಷ್ ನಗರ, ತೋನ್ಸೆಹೂಡೆ ಸೇರಿದಂತೆ ಹಲವು ಕಡೆಗಳಲ್ಲಿ ಮಿಲಾದ್ ಮೆರವಣಿಗೆ ನಡೆದವು.
ಜಿಲ್ಲೆಯಲ್ಲಿರುವ ಆಯಾ ಮಸೀದಿಗಳಿಂದ ಹೊರಟ ಮೆರವಣಿಗೆಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳಿಕ ಅದೇ ಮಸೀದಿಗಳಿಗೆ ಮರಳಿದವು. ಮೆರವಣಿಗೆಯಲ್ಲಿ ಪ್ರವಾದಿ ಸಂದೇಶ ಸಾರುವ ಘೋಷಣೆ, ದಫ್ ಕುಣಿತ, ಸ್ಕೌಟ್ಸ್ ಹಾಗೂ ಮದರಸಾ ವಿದ್ಯಾರ್ಥಿಗಳು ಗಮನ ಸೆಳೆದರು.
ಉಡುಪಿಯ ದೊಡ್ಡಣಗುಡ್ಡೆ ಜುಮ್ಮಾ ಮಸೀದಿಯಿಂದ ಹೊರಟ ಸಂದಲ್ ಮೆರವಣಿಗೆಯು ಬುದಗಿ ಸ್ಟೋರ್ವರೆಗೆ ಸಾಗಿ ಬಳಿಕ ಮಸೀದಿಗೆ ಮರಳಿ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ಮಕ್ಕಳ ಸ್ಕೌಟ್ಸ್ ಹಾಗೂ ದಾಯಿರ ತಂಡದ ಪ್ರದರ್ಶನ ನಡೆಯಿತು.
ನೇಜಾರು ಜುಮ್ಮಾ ಮಸೀದಿ ವತಿಯಿಂದ ವೈಭವದ ಮಿಲಾದ್ ಮೆರವಣಿಗೆ ನಡೆಯಿತು. ಮಸೀದಿಯಿಂದ ಸಂತೆಕಟ್ಟೆಗೆ ತೆರಳಿ ಅಲ್ಲಿಂದ ಕಲ್ಯಾಣಪುರ, ನಿಡಂಬಳ್ಳಿ ರಸ್ತೆಯ ಮೂಲಕ ಸುಮಾರು ಐದು ಕಿ.ಮೀ. ಸಂಚರಿಸಿ ನೇಜಾರು ಮಸೀದಿಗೆ ಮೆರವಣಿಗೆ ಮರಳಿತು.
ಪಾನೀಯ, ಸಿಹಿತಿಂಡಿ ವಿತರಣೆ
ಎಲ್ಲೆಡೆ ನಡೆದ ಮೆರವಣಿಗೆಯಲ್ಲಿ ಮುಸ್ಲಿಮರಿಗೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯರು ತಂಪು ಪಾನೀಯ, ಸಿಹಿತಿಂಡಿ ವಿತರಿಸಿ ಶುಭ ಹಾರೈಸಿದರು. ನೇಜಾರು ಭಜನಾ ಮಂದಿರ, ನೇಜಾರು ಕ್ರೀಡಾಂಗಣ, ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ, ಗುರು ಕನ್ಸ್ಟ್ರಕ್ಷನ್ನ ಮಾಲೀಕ ಚಂದ್ರಶೇಖರ್ ಆಚಾರ್ಯ, ನಾಗೇಶ್ ಆಚಾರ್ಯ ಹಾಗೂ ಕೆಳಾರ್ಕಳಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದ ವತಿಯಿಂದ ಪಾನೀಯ ಹಾಗೂ ಸಿಹಿತಿಂಡಿ ವಿತರಿಸಿ ಕೋಮುಸೌಹಾರ್ದದ ಸಂದೇಶ ಸಾರಿದರು.