ಹಿಂದು ಮಹಿಳೆಗೆ ಸಹಕರಿಸುವಂತೆ ಉಡುಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಅಹವಾಲು ಸಲ್ಲಿಸಿದ ಮುಸ್ಲಿಂ ಮಹಿಳೆಯರು.
* ಇದು ನಮ್ಮ ಭಾರತ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
* ಅಪರೂಪದ ಘಟನೆಗೆ ಸಾಕ್ಷಿಯಾದ ಉಡುಪಿ
ಉಡುಪಿ: ಸರ್ಕಾರದಿಂದ 35 ವರ್ಷದ ಹಿಂದೆ ನಿವೇಶನ ಮಂಜೂರಾಗಿದ್ದರೂ ಅರಣ್ಯ ಇಲಾಖೆಯ ಅಡ್ಡಿಯಿಂದಾಗಿ ಮನೆ ಕಟ್ಟಲಾಗದೆ ದಿಕ್ಕೆಟ್ಟಿದ್ದ ವಿಧವೆ, ಹಿಂದು ಮಹಿಳೆಯೊಬ್ಬರ ಪರವಾಗಿ ಪಕ್ಕದ ಮನೆಯ ಮುಸ್ಲಿಂ ಮಹಿಳೆಯರು ಧ್ವನಿಯೆತ್ತಿದ ಅಪರೂಪದ ಘಟನೆ ಉಡುಪಿಯಲ್ಲಿ ಶನಿವಾರ (ಮೇ 16) ನಡೆದಿದೆ.
ಕೆಡಿಪಿ ಸಭೆಯ ನಿಮಿತ್ತ ಉಡುಪಿಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿಯಾದಮುಸ್ಲಿಂ ಮಹಿಳೆಯರು ನೆರವು ಯಾಚಿಸಿದ್ದು ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಯಿತು.
5 ಸೆಂಟ್ಸ್ ಭೂಮಿ ಮಂಜೂರು
ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿ ಗಿರಿಜಾ ಶೆಟ್ಟಿಗಾರ್ ಎಂಬ ವೃದ್ಧೆ ಗಂಡನನ್ನು ಕಳಕೊಂಡಿದ್ದು ಒಬ್ಬಂಟಿಯಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಅವರಿಗೆ 1989ರಲ್ಲಿ ಭೂರಹಿತರಿಗೆ ವಿತರಿಸಲಾಗುವ ವಸತಿ ನಿವೇಶನ ಯೋಜನೆಯಡಿ 5 ಸೆಂಟ್ಸ್ ಭೂಮಿ ಮಂಜೂರಾಗಿತ್ತು. ಅದರ ಹಕ್ಕುಪತ್ರವನ್ನೂ ಮಹಿಳೆಗೆ ನೀಡಲಾಗಿತ್ತು. ಆದರೆ, ಆ ಭೂಮಿ ರಕ್ಷಿತಾರಣ್ಯ ವ್ಯಾಪ್ತಿಗೆ ಸೇರಿದ್ದೆಂದು ಅರಣ್ಯಾಧಿಕಾರಿಗಳು ವಾಸ್ತವ್ಯಕ್ಕೆ ಅಡ್ಡಿಪಡಿಸಿ, ಅದನ್ನು ಮಹಿಳೆಯ ಸ್ವಾಧೀನಕ್ಕೆ ನೀಡಲು ನಿರಾಕರಿಸಿದ್ದರು. ಆದರೆ, ಅದನ್ನು ಪ್ರಶ್ನಿಸಿ ಮಹಿಳೆ ಹೋರಾಡುವ ಸ್ಥಿತಿಯಲ್ಲಿ ಇರಲಿಲ್ಲ.
ಸಚಿವೆಯ ಮೊರೆ
ಬಡ ಹಿಂದೂ ಮಹಿಳೆಗೆ ಭೂಮಿಯ ವಾಸ್ತವ್ಯ ಸಿಗದೆ, ಮನೆಯನ್ನೂ ಕಟ್ಟಲಾಗದೆ ಕೂಲಿ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಕಾನೂನು ಪ್ರಕಾರ ಭೂಮಿ ಪಡೆಯಲು ನೆರೆಮನೆಯ ಸಲಹುದ್ದೀನ್ ಎಂಬವರ ಕುಟುಂಬಸ್ಥರು ಗಿರಿಜಾ ಅವರನ್ನು ಹಲವು ಅಧಿಕಾರಿಗಳ ಬಳಿಗೆ ಕರೆದೊಯ್ದಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ಹಕ್ಕುಪತ್ರ ಇದ್ದರೂ ವಾಸ್ತವ್ಯಕ್ಕೆ ಅರಣ್ಯ ಇಲಾಖೆ ಅಡ್ಡಿಯಾಗಿದೆ ಎಂದು ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಮೊರೆ ಹೋಗಿದ್ದಾರೆ.
ನಮಗೇನೂ ಬೇಡ, ವೃದ್ಧೆಗೆ ಸಹಕರಿಸಿ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಗೆಸ್ಟ್ ಹೌಸ್ಗೆ ಬಂದ ಇಬ್ಬರು ಮುಸ್ಲಿಂ ಮಹಿಳೆಯರು, ವೃದ್ಧೆಗೆ ನೆರವಾಗಿ ಎಂದು ಕೇಳಿಕೊಂಡಿದ್ದಾರೆ. ನಮಗೇನೂ ಬೇಡ, ಆ ಮಹಿಳೆಗೆ ಒಂದು ಸಹಾಯ ಮಾಡಿ ಎಂದು ಅಹವಾಲು ಸಲ್ಲಿಸಿದ್ದಾರೆ. ಈ ದೃಶ್ಯವನ್ನು ಕಂಡ, ಅವರ ಮಾತನ್ನು ಕೇಳಿದ ಸಚಿವೆ, 'ಇದು ನೋಡಿ ನಮ್ಮ ಭಾರತ. ಬಡ ಹಿಂದೂ ಮಹಿಳೆಯ ಪರವಾಗಿ ಮುಸ್ಲಿಂ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಉಡುಪಿಯ ಬಿಜೆಪಿಗರು ಇವರನ್ನು ನೋಡಿ ಕಲಿಯಬೇಕು' ಎಂದರು. ಮಹಿಳೆಯ ಪರವಾಗಿ ಭೂಮಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸುತ್ತೇನೆ ಎಂದು ಆ ಮಹಿಳೆಯರಿಗೆ ಭರವಸೆ ನೀಡಿದ್ದಾರೆ.