ಮುಸ್ಲಿಂ ಬಾಂಧವ್ಯ ವೇದಿಕೆ ವಕ್ತಾರ ಮುಸ್ತಾಕ್​ ಹೆನ್ನಾಬೈಲು ಮಾತನಾಡಿದರು.  
ಉಡುಪಿ

ಗೋವು ರಾಷ್ಟ್ರೀಯಪ್ರಾಣಿಯಾಗಿ ಘೋಷಿಸಲು ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಉಡುಪಿ: ದೇಶಾದ್ಯಂತ ಗೋಹತ್ಯೆ ಹಾಗೂ ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಏಕರೂಪದ ಕಾನೂನು ಜಾರಿಗೆ ತರಬೇಕು. ಗೋವನ್ನು ಭಾರತದ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಮುಸ್ಲಿಂ ಬಾಂಧವ್ಯ ವೇದಿಕೆ ವಕ್ತಾರ ಮುಸ್ತಾಕ್​ ಹೆನ್ನಾಬೈಲು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನಗಳಿಂದ ಜೊತೆಯಾಗಿ ಬದುಕುತ್ತಿರುವ ಹಿಂದೂ ಮತ್ತು -ಮುಸ್ಲಿಮರ ನಡುವಿನ ಸಾಮರಸ್ಯದ ಪರಂಪರೆಗೆ ಗೋಹತ್ಯೆ ಮತ್ತು ಗೋಮಾಂಸ ರಫ್ತು ನಕಾರಾತ್ಮಕ ಪರಿಣಾಮ ಬೀರಬಾರದು ಎನ್ನುವುದು ಸಂಟನೆ ಆಶಯವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಗೋವಿನ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್​ ರಾಮ್​ ಮೇಘವಲ್​ ಇತ್ತೀಚೆಗೆ 'ಗೋಹತ್ಯೆ ನಿಷೇಧದ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹೇಳಿರುವುದು ನಿರಾಸೆ ಮೂಡಿಸಿದೆ. ಬಿಜೆಪಿ ಆಡಳಿತದ ಗೋವಾ ಮತ್ತು ಅಸ್ಸಾಂ ರಾಜ್ಯದಲ್ಲಿ ಗೋ ಹತ್ಯೆ ನಿಷೇಧವಿಲ್ಲ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಗೋಹತ್ಯೆ ಹಾಗೂ ಗೋಮಾಂಸ ರಫ್ತನ್ನು ತಡೆಯುವ ನಿಟ್ಟಿನಲ್ಲಿ ಸಮರ್ಪಕ ಕ್ರಮ ಕೈಗೊಂಡಿಲ್ಲ. ಹೀಗಾಗಿ ದೇಶದಲ್ಲಿನ ಕಸಾಯಿಖಾನೆಗಳನ್ನು ಮುಚ್ಚಿ, ಗೋಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಝಾಕೀರ್​ ಹುಸೈನ್​ ಉಚ್ಚಿಲ, ವೇದಿಕೆಯ ಪ್ರಮುಖರಾದ ಅಬ್ದುಲ್​ ಹಫೀಝ್​ ಖಾಸಿಮಿ, ಇಬ್ರಾಹಿಂ ನಡುಪದವು , ಕೋಟ ಇಬ್ರಾಹಿಂ ಸಾಹೇಬ್​ ಉಪಸ್ಥಿತರಿದ್ದರು.