ಮಸ್ಕತ್​-ಮಂಗಳೂರು ವಿಮಾನಯಾನ ಸೇವೆ ಪುನರಾರಂಭಿಸುವಂತೆ ಇತ್ತೀಚೆಗೆ ರಾಮಮೋಹನ್​ ನಾಯ್ಡು ಕಿಂಜರಾಪು ಅವರಿಗೆ ಮನವಿ ಸಲ್ಲಿಸಿದ್ದ ಕೋಟ ಶ್ರೀನಿವಾಸ ಪೂಜಾರಿ. 
ಉಡುಪಿ

ಮಾರ್ಚ್​ನಲ್ಲಿ ಮಸ್ಕತ್-ಮಂಗಳೂರು ನೇರ ವಿಮಾನ ಸೇವೆ

* ಉಡುಪಿ ಸಂಸದ ಕೋಟ ಪೂಜಾರಿ ಮಾಹಿತಿ

* ಪುನರಾರಂಭದ ಕುರಿತು ಸಚಿವರಿಂದ ಪತ್ರ

ಉಡುಪಿ: ಸ್ಥಗಿತಗೊಂಡಿದ್ದ ಮಸ್ಕತ್​-ಮಂಗಳೂರು ನೇರ ವಿಮಾನಯಾನ ಸೇವೆ ಮಾರ್ಚ್​ ತಿಂಗಳಲ್ಲಿ ಪುನಾರಾರಂಭಗೊಳ್ಳಲಿದೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
ಈ ಮಾರ್ಗದ ನೇರ ವಿಮಾನ ಸೇವೆ ಪುನರಾರಂಭಿಸುವ ಕುರಿತು ಸಂಸದ ಪೂಜಾರಿ ಅವರು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್​ ನಾಯ್ಡು ಕಿಂಜರಾಪು ಅವರೊಂದಿಗೆ ಇತ್ತೀಚೆಗೆ ಪತ್ರ ವ್ಯವಹಾರ ನಡೆಸಿ, ಮನವಿಯನ್ನೂ ಸಲ್ಲಿಸಿದ್ದರು. 
ಕೋಟ ಪತ್ರಕ್ಕೆ ಸ್ಪಂದಿಸಿ, ಮರುಪತ್ರದ ಮೂಲಕ ಉತ್ತರಿಸಿರುವ ಸಚಿವ ಕಿಂಜರಾಪು, ಈಗಾಗಲೇ ತಮ್ಮ ಪತ್ರದ ಹಿನ್ನೆಲೆಯಲ್ಲಿ ಏರ್​ ಇಂಡಿಯಾ ಲಿಮಿಟೆಡ್​ನೊಂದಿಗೆ ಸಮಾಲೋಚನೆ ಮಾಡಿದ್ದೇನೆ. ಮಾರ್ಚ್​ ತಿಂಗಳಿನಿಂದ ಮಸ್ಕತ್​-ಮಂಗಳೂರು ಮಾರ್ಗದಲ್ಲಿ ವಿಮಾನಯಾನ ಸಂಚಾರ ಪುನರಾರಂಭಿಸುವ ಬಗ್ಗೆ ಸಂಸ್ಥೆಯವರೊಂದಿಗೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸದ ಪೂಜಾರಿ ಅವರ ಈ ಪ್ರಯತ್ನಕ್ಕೆ ವಿಮಾನಯಾನ ಪ್ರಯಾಣಿಕ ಸಂಘಟನೆ ಅಭಿನಂದನೆ ಸಲ್ಲಿಸಿದೆ.