ಕುಂದಾಪುರ ಪುರಸಭೆ  
ಉಡುಪಿ

ಹರಾಜು ಪ್ರಕ್ರಿಯೆ ಮುಂದೂಡಿದ ಪುರಸಭೆ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ಶುಲ್ಕ ವಿಧಿಸುವ ಸಲುವಾಗಿ ಕರೆದಿದ್ದ ಹರಾಜು ಪ್ರಕ್ರಿಯೆಯನ್ನು ಪುರಸಭೆ ಮುಂದೂಡಿದೆ. ಪುರಸಭೆಯ ಈ ನಡೆಯ ವಿರುದ್ಧದ ಎಲ್ಲೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಅನಿವಾರ್ಯವಾಗಿ ಈ ಹರಾಜನ್ನು ಮುಂದೂಡಿದೆ ಎನ್ನಲಾಗುತ್ತಿದೆ.
ಈ ಮೊದಲು ಪುರಸಭೆ ಪಾವತಿ ಪಾರ್ಕಿಂಗ್ ವ್ಯವಸ್ಥೆಗೆ ತೀರ್ಮಾನಿಸಿ, ವಾಹನಗಳ ನಿಲುಗಡೆ ಶುಲ್ಕ ವಿಧಿಸಲು ಟೆಂಡರ್ ಕರೆದಿತ್ತು. ಏ.7ರಂದು ಪುರಸಭೆ ಸಭಾಂಗಣದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ನಿಗದಿಗೊಳಿಸಿತ್ತು. ಈಗ ಆ ಹರಾಜು ಪ್ರಕ್ರಿಯೆ ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಮುಂದಿನ ಅವಧಿ ತಿಳಿಸಲಾಗುವುದು ಎಂದು ಪುರಸಭೆ ಪ್ರಕಟಣೆ ನೀಡಿದೆ.

ವ್ಯಾಪಾರ ಚಟುವಟಿಕೆಗೆ ಪೆಟ್ಟು

ಪಾವತಿ ಪಾರ್ಕಿಂಗ್ ವ್ಯವಸ್ಥೆಗೆ ಮುಂದಾಗಿರುವ ನಡೆ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ. ಪುರಸಭೆ ಮಾಜಿ ಸದಸ್ಯರು, ವಿವಿಧ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳು, ವರ್ತಕರು, ಸಾರ್ವಜನಿಕರ ಸಹಿತ ಬಹುತೇಕ ಎಲ್ಲರಿಂದಲೂ ವಿರೋಧ ವ್ಯಕ್ತವಾಗಿದ್ದು, ಈ ನಿರ್ಧಾರ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ರಸ್ತೆಬದಿ ವಾಹನ ನಿಲ್ಲಿಸಲು ಶುಲ್ಕ ವಿಧಿಸುವುದರಿಂದ ಸಾಮಾನ್ಯ ಜನರು, ಸಣ್ಣ ವ್ಯಾಪಾರಿಗಳು ಮತ್ತು ವ್ಯಾಪಾರಕ್ಕೆ ಬರುವ ಗ್ರಾಹಕರು ಅನಗತ್ಯ ತೊಂದರೆ ಅನುಭವಿಸಬೇಕಾಗುತ್ತದೆ. ಇದರಿಂದ ನಗರದ ವ್ಯಾಪಾರ ಚಟುವಟಿಕೆಗಳ ಮೇಲೂ ಕೆಟ್ಟ ಪರಿಣಾಮ ಬೀಳುವ ಸಾಧ್ಯತೆ ಇದೆ. ಇದು ಜನ ವಿರೋಧಿ ನಡೆ ಎಂಬ ಕೂಗು ಕೇಳಿಬರುತ್ತಿದೆ.

ವಾಹನ ನಿಲುಗಡೆಗೆ ಶುಲ್ಕ ವಿಧಿಸುವ ಸಲುವಾಗಿ ಕರೆದಿರುವ ಹರಾಜು ಪ್ರಕ್ರಿಯೆ ಕಾರಣಾಂತರಗಳಿಂದ ಮುಂದೂಡಲಾಗಿದೆ. ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಇರುವ ಕಾರಣಕ್ಕೆ ವ್ಯವಸ್ಥಿತ ಪಾರ್ಕಿಂಗ್ ಕಲ್ಪಿಸಲು ಈ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಜನರು, ವರ್ತಕರು, ಸಂಘ-ಸಂಸ್ಥೆಗಳ ವಿರೋಧ ಇರುವುದರಿಂದ ಇದರ ಸಾಧಕ-ಬಾಧಕಗಳನ್ನು ಚರ್ಚಿಸಿ, ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.