ಚಿಮಣಿಯಲ್ಲಿ ದೊಡ್ಡ ಮಟ್ಟದಲ್ಲಿ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿರುವುದು.  
ಉಡುಪಿ

ಎಂಆರ್‌ಪಿಎಲ್ ಚಿಮಣಿ ದೊಡ್ಡ ಮಟ್ಟದ ಬೆಂಕಿ ಜ್ವಾಲೆ

ಮಂಗಳೂರು: ಕುತ್ತೆತ್ತೂರಿನಲ್ಲಿರುವ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ ಚಿಮಣಿ ಭಾಗದಲ್ಲಿ ಭಾನುವಾರ ರಾತ್ರಿ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕದ ವಾತಾವರಣ ಉಂಟು ಮಾಡಿತ್ತು.
ಬೆಂಕಿ ಜತೆ ದಟ್ಟ ಹೊಗೆ ಹಾಗೂ ಜೋರಾದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿತು. ರಾತ್ರಿ ವೇಳೆ ಚಿಮಣಿಯಿಂದ ಸಾಮಾನ್ಯಕ್ಕಿಂತ ಹೆಚ್ಚು ಎತ್ತರದ ಜ್ವಾಲೆ ಕಾಣಿಸಿಕೊಂಡಿದ್ದು, ಕಪ್ಪು ಹೊಗೆ ಆವರಿಸಿತ್ತು. ಕೆಲ ಸಮಯದವರೆಗೆ ಜೋರಾದ ಶಬ್ದವೂ ಕೇಳಿಬಂದಿದ್ದು, ಇದು ಬೆಂಕಿ ಅವಘಡವೇ ಎಂಬ ಅನುಮಾನದಿಂದ ಹಲವರು ಆತಂಕಗೊಂಡರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಚಿಮಣಿಯಿಂದ ಬೆಂಕಿಯ ಜ್ವಾಲೆಗಳು ಮಂಗಳೂರು ನಗರದ ತನಕ ಕಾಣಿಸಿದೆ. ಇದರ ವಿಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತೈಲ ಶುದ್ಧೀಕರಣ ಘಟಕಗಳಲ್ಲಿ ಕೆಲವೊಮ್ಮೆ ತಾಂತ್ರಿಕ ವ್ಯತ್ಯಯ ಅಥವಾ ಒತ್ತಡ ನಿಯಂತ್ರಣಕ್ಕಾಗಿ ಹೆಚ್ಚುವರಿ ಅನಿಲವನ್ನು ಸುರಕ್ಷಿತವಾಗಿ ಸುಡುವ ಪ್ರಕ್ರಿಯೆಯನ್ನು ಫ್ಲೇರಿಂಗ್ ಎಂದು ಕರೆಯಲಾಗುತ್ತದೆ. ಈ ವೇಳೆ ಸಾಮಾನ್ಯಕ್ಕಿಂತ ಹೆಚ್ಚು ಜ್ವಾಲೆ, ಹೊಗೆ ಮತ್ತು ಶಬ್ದ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.