ಉಡುಪಿಯ ಅಲೆವೂರಿನಲ್ಲಿ ನಿರ್ಮಾಣಗೊಂಡ ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ನೀಡಿದ ಕೋಟ ಶ್ರೀನಿವಾಸ ಪೂಜಾರಿ ಕಾಮಗಾರಿ ಪರಿಶೀಲಿಸಿದರು. ವಸಂತ್​, ಸತೀಶ್​ ರಾವ್​ ಹಾಗೂ ಶಾಲೆಯ ಶಿಕ್ಷಕರು, ಸಿಬ್ಬಂದಿ ಇದ್ದರು. 
ಉಡುಪಿ

ಶೀಘ್ರದಲ್ಲೇ ಕೇಂದ್ರೀಯ ವಿದ್ಯಾಲಯದ ಉದ್ಘಾಟನೆ

* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

* ಅಲೆವೂರಿನಲ್ಲಿ ನೂತನ ಕಟ್ಟಡ ಕಾಮಗಾರಿ ಪರಿಶೀಲನೆ

ಉಡುಪಿ: ಕೇಂದ್ರ ಸರ್ಕಾರದ ವತಿಯಿಂದ ಅಂದಾಜು 28 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕೇಂದ್ರೀಯ ವಿದ್ಯಾಲಯದ ಕಟ್ಟಡ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಶೇ.95ರಷ್ಟು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರದ ಸಚಿವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.
ಉಡುಪಿ ತಾಲೂಕಿನ ಅಲೆವೂರಿನಲ್ಲಿ ನಿರ್ಮಾಣಗೊಂಡಿರುವ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡಕ್ಕೆ ಸೋಮವಾರ (ಜು.6) ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಅತ್ಯುತ್ತಮ ಶಿಕ್ಷಣ
ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸ್ವಂತ ಕಟ್ಟಡ ನಿರ್ಮಿಸಲಾಗಿದ್ದು, ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಹಾಗೂ ಉತ್ತಮ ವಾತಾವರಣದಲ್ಲಿ ವಿದ್ಯಾಭ್ಯಾಸ ನಡೆಸಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದರು. 

1ರಿಂದ 5 ಹೆಚ್ಚುವರಿ ತರಗತಿ

ಪ್ರಸ್ತುತ ಶಾಲೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ 400ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ 1ರಿಂದ 5ನೇ ತರಗತಿಯವರೆಗೆ ಹೆಚ್ಚುವರಿ ತರಗತಿ ತೆರೆಯಲು ಅನುಮೋದನೆ ದೊರೆತಿದ್ದು, ಅವೂ ಆರಂಭವಾಗಿವೆ. ಹೀಗಾಗಿ ಉಡುಪಿ ಹಾಗೂ ಜಿಲ್ಲೆಯ ಪಾಲಕರು ತಮ್ಮ ಮಕ್ಕಳನ್ನು ಕೇಂದ್ರೀಯ ವಿದ್ಯಾಲಯಕ್ಕೆ ದಾಖಲಾತಿ ಮಾಡಿಸುವ ಮೂಲಕ ಸೌಲಭ್ಯದ ಪ್ರಯೋಜನ ಪಡೆಯಬೇಕು ಎಂದರು.
ಕಟ್ಟಡದ ಒಳಗೆ ಎಲ್ಲ ಕೊಠಡಿ ಹಾಗೂ ತರಗತಿಗೆ ಭೇಟಿ ನೀಡಿ ಪರಿಶೀಲಿಸಿದ ಸಂಸದ ಕೋಟ, ವಿದ್ಯಾರ್ಥಿಗಳೊಂದಿಗೆ ಕೆಲ ಸಮಯ ಸಂವಾದ ನಡೆಸಿದರು. ಶಾಲೆಯಲ್ಲಿ ಕಲಿಕಾ ವಾತಾವರಣ, ವಿದ್ಯಾರ್ಥಿಗಳ ಯೋಗಕ್ಷೇಮ, ಶೈಕ್ಷಣಿಕ ಚಟುವಟಿಕೆ ಹಾಗೂ ಮೂಲಸೌಕರ್ಯಗಳ ಕುರಿತು ಪ್ರಾಂಶುಪಾಲರಿಂದ ಮಾಹಿತಿ ಪಡೆದರು. 
ಶಾಲೆಯ ಶಿಕ್ಷಕ ರಾಗೇಶ್, ಸಿಬ್ಬಂದಿ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಯ ಇಂಜಿನಿಯರ್​ ಸತೀಶ್​ ರಾವ್​, ಗುತ್ತಿಗೆದಾರರು ಇದ್ದರು.
"

ಅಲೆವೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಮಕ್ಕಳು ಬರಲು ಅನುಕೂಲ ಆಗುವಂತೆ ಮಣಿಪಾಲದಿಂದ ಬಸ್​ ವ್ಯವಸ್ಥೆ ಮಾಡಿಸಬೇಕು. ಶಾಲೆಗೆ ಜನರೇಟರ್​, ಮೇಲ್ಛಾವಣಿಯ ಅಗತ್ಯತೆ ಇದೆ. ಅಲೆವೂರು ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ದುರಸ್ತಿಗೆ ಕ್ರಮಕೈಗೊಳ್ಳಬೇಕು.

— ವಸಂತ್​. ಕೇಂದ್ರೀಯ ವಿದ್ಯಾಲಯದ ಪ್ರಭಾರ ಪ್ರಾಂಶುಪಾಲ.