ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ.
* ರಾಜ್ಯ ಸರ್ಕಾರಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹ
* ಕಸ್ತೂರಿ ರಂಗನ್ ವರದಿ ವಿಚಾರವಾಗಿ ಸಿಎಂ ಭೇಟಿಯಾಗುವೆ
ಉಡುಪಿ: ಕಸ್ತೂರಿ ರಂಗನ್ ವರದಿ ಜಾರಿ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತನಾಡಲು ಸಮಯ ಕೇಳಿದ್ದೇನೆ. ಅನೇಕ ಪರಿಸರವಾದಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ತಜ್ಞರ ಸಮಿತಿ ರಚಿಸಬೇಕೆಂದು ಸಿಎಂಗೆ ಒತ್ತಾಯಿಸುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ಉಡುಪಿಯ ಪ್ರವಾಸಿ ಮಂದಿರದಲ್ಲಿ ಶನಿವಾರ (ಸೆ.12) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇರಳ ಸರ್ಕಾರದವರು ಉಮರ್ ಸಮಿತಿ ಎಂಬ ಆಯೋಗ ರಚಿಸಿ ಭೂ ಸರ್ವೇ ಮಾಡಿದ್ದಾರೆ. ಅದರ ಆಧಾರದಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದು ಸುಪ್ರೀಂ ಕೋರ್ಟ್ಗೆ ಸಲ್ಲಿಕೆ ಆದಾಗ ಬಹುತೇಕ ಸಹಮತ ಬಂದಿದೆ. ಹೀಗಾಗಿ ಕಸ್ತೂರಿ ರಂಗನ್ ವರದಿಯ ಕಂಟಕದಿಂದ ಕೇರಳ ಪಾರಾದಂತೆ ಕಂಡುಬರುತ್ತಿದೆ ಎಂದರು.
ಇ.ಡಿ. ದಾಳಿ ಕಾನೂನುಬದ್ಧ
ಕಾಂಗ್ರೆಸ್ ನಾಯಕರನ್ನು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂಬ ಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಯಾವ ಆಧಾರದಲ್ಲಿ ಈ ಆರೋಪ ಮಾಡಿದ್ದಾರೆ ಗೊತ್ತಿಲ್ಲ. ಇ.ಡಿ. ಸ್ವತಂತ್ರ ಸಂಸ್ಥೆ. ನಮ್ಮ ಪಕ್ಷದ ದಾವಣಗೆರೆಯ ಮಾಜಿ ಸಂಸದನ ಮನೆಯ ಮೇಲೆ, ರೆಡ್ಡಿ ಅವರ ಮೇಲೂ ಇ.ಡಿ. ದಾಳಿ ನಡೆಸಿತ್ತು. ವ್ಯಕ್ತಿಗತವಾಗಿ ಸಚಿವ ಸತೀಶ್ ಜಾರಕಿಹೊಳಿ ಮೇಲೆ ಯಾರಿಗೂ ದೂರು-ದುಮ್ಮಾನ ಇಲ್ಲ. ಹೀಗಾಗಿ ಇ.ಡಿ. ದಾಳಿ ಕಾನೂನು ಬದ್ಧವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಇ.ಡಿ. ದಾಳಿ ನಡೆದಿರಲಿಲ್ಲವೇ? ರಾಜಕೀಯ ಉದ್ದೇಶದ ಟೀಕೆಗಳು ಬೇಡ. ಇ.ಡಿ. ದಾಳಿಗೆ ಕೇಂದ್ರ ಸರ್ಕಾರ ಅಥವಾ ಬಿಜೆಪಿ ಕಾರಣವಲ್ಲ ಎಂದರು.
5 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ
ರಾಜ್ಯದಲ್ಲಿ ಮಳೆ ಕೊರತೆಯಿಂದ 150 ತಾಲೂಕುಗಳು ಬರ ಪೀಡಿತವಾಗಿದೆ. ರಾಜ್ಯ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಸುಮಾರು 200 ಕಿಮೀ ಪಾದಯಾತ್ರೆ ನಡೆಸಿದ್ದೇವೆ. ರಾಜ್ಯ ಸರ್ಕಾರ ಎಲ್ಲವುದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ. ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹಾಗೂ ಜನ&ಜಾನುವಾರು ಗುಳೆ ಹೋಗುವುದನ್ನು ತಪ್ಪಿಸಲು ಸಿಎಂ ಡಿಕೆಶಿ ತಕ್ಷಣ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ಬರಗಾಲದ ಸಂದರ್ಭದಲ್ಲಿಯೂ ಸಾವಿರ ಕೋಟಿ ರೂ. ಬಿಡುಗಡೆ ಮಾಡದಿರುವುದು ದುರಾದೃಷ್ಟ. ಈ ವಿಚಾರವಾಗಿಯೇ ಬಡವರು, ದುರ್ಬಲರು, ಪ.ಜಾತಿ, ಪಂಗಡದವರೆಲ್ಲ ಸೇರಿ ಪಾದಯಾತ್ರೆ ಮಾಡಿದ್ದೇವೆ. ಬಿಜೆಪಿ ನಡೆಸಿರುವ ಈ ಪಾದಯಾತ್ರೆ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಕೋಟ ಪೂಜಾರಿ ತಿಳಿಸಿದರು.