ಉಡುಪಿಯಲ್ಲಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಕೋಟ ಶ್ರೀನಿವಾಸ ಪೂಜಾರಿ ಸಭೆ ನಡೆಸಿದರು. ಪ್ರತೀಕ್​ ಬಾಯಲ್​, ಉದಯಕುಮಾರ್​ ಶೆಟ್ಟಿ, ರಾಕೇಶ್​, ಯಶವಂತ್​, ಶೇಖರ್​ ಇತರರಿದ್ದರು. 
ಉಡುಪಿ

ಪಿಎಂ ಸೂರ್ಯ ಘರ್​; 9.98 ಲಕ್ಷ ರೂ. ಬಿಡುಗಡೆ

* ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ 

* ಉಡುಪಿಯಲ್ಲಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ

ಉಡುಪಿ: ಪ್ರಧಾನಮಂತ್ರಿ ಸೂರ್ಯ ಘರ್​ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಸೋಲಾರ್​ ಅಳವಡಿಕೆಗೆ 4,546 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 1,258 ಮನೆಗಳಿಗೆ ಸೋಲಾರ್​ ಸಬ್ಸಿಡಿ ಮಂಜೂರಾತಿ ಆಗಿದೆ. 1,280 ಕುಟುಂಬಗಳಿಗೆ ತಲಾ 78 ಸಾವಿರ ರೂ.ನಂತೆ ಸಬ್ಸಿಡಿ ಹಣ ನೀಡಲಾಗಿದ್ದು, ಒಟ್ಟು 9.98 ಲಕ್ಷ ರೂ.ವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಯಲ್ಲಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಶುಕ್ರವಾರ (ಏ.10) ಸಭೆ ನಡೆಸಿ ಮಾತನಾಡಿದರು.

ಗುರಿ ಮೀರಿ ಸಾಧನೆ

ಪ್ರಧಾನಮಂತ್ರಿ ಸೂರ್ಯ ಘರ್​ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 2024-25ರಲ್ಲಿ 302 ಫಲಾನುಭವಿಗಳ ಗುರಿ ನಿಗದಿಪಡಿಸಿದ್ದು, ಗೃಹ ಬಳಕೆಯ 490  ಫಲಾನುಭವಿಗಳು ಯೋಜನೆಯಡಿ ಸೌಲಭ್ಯ ಪಡೆದಿದ್ದಾರೆ. 2025-26ರಲ್ಲಿ ಸೋಲಾರ್​ ಅಳವಡಿಕೆಯಲ್ಲಿ 240 ಮನೆಗಳಿಗೆ ಗುರಿ ನಿಗದಿಸಿದ್ದು, 868 ಮನೆಗಳಿಗೆ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಪಿಎಂ ಸೂರ್ಯ ಘರ್​ ಯೋಜನೆಯಡಿ ಮತ್ತಷ್ಟು ಮನೆಗಳ ಮೇಲ್ಛಾವಣಿಯ ಮೇಲೆ ಸೋಲಾರ್​ ವಿದ್ಯುತ್​ ಅಳವಡಿಕೆಗೆ ಪ್ರಯತ್ನಿಸಬೇಕು ಎಂದರು.

ಅರಣ್ಯ ಇಲಾಖೆಯಿಂದ ತೊಡಕು

ಬೈಂದೂರಿನ ಕಿರಿಮಂಜೇಶ್ವರ, ಬ್ರಹ್ಮಾವರದ ಕಾವಡಿ, ಕಾಪುವಿನ ಬೆಳ್ಳೆ ಈ ಮೂರು ಸ್ಥಳಗಳಲ್ಲಿ ಕುಸುಮ್​ ಸಿ ಯೋಜನೆಯಡಿ ರೈತರಿಗೆ ಸೋಲಾರ್​ ಪ್ಲಾಂಟ್​ ಅಳವಡಿಸಲು ಕೇಂದ್ರ ಸರ್ಕಾರ 40 ಕೋಟಿ ರೂ. ಮಂಜೂರು ಮಾಡಿದೆ. ಆದರೆ, ಅರಣ್ಯ ಇಲಾಖೆ ಸಾಮಾಜಿಕ ಅರಣ್ಯದ ನೆಪವೊಡ್ಡಿ ಕುಸುಮ್​ -ಸಿ ಯೋಜನೆಯ ಅನುಷ್ಠಾನಕ್ಕೆ ತೊಂದರೆ ಕೊಡುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಸಂಸದ ಕೋಟ ಪ್ರತಿಕ್ರಿಯಿಸಿ, ಈ ಬಗ್ಗೆ ನಾನು ರಾಜ್ಯದ ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತಾಡಿದ್ದು, ಅರಣ್ಯಾಧಿಕಾರಿಗಳು ಅವರ ನಿರ್ದೇಶನ ಪಾಲಿಸುತ್ತಿಲ್ಲ ಎಂದು ತಿಳಿಸಿದರು. 
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್​ ಬಾಯಲ್​, ಯೋಜನಾ ಅಧಿಕಾರಿ ಉದಯಕುಮಾರ್​ ಶೆಟ್ಟಿ, ಮೆಸ್ಕಾಂ ಅಧೀಕ್ಷಕ ರಾಕೇಶ್​, ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತ ಯಶವಂತ್​, ಯೋಜನೆಯ ಅನುಷ್ಠಾನದ ಸದಸ್ಯರಾದ ಶೇಖರ್​ ಇನ್ನಿತರರು ಉಪಸ್ಥಿತರಿದ್ದರು.

ಅಭಿವೃದ್ಧಿ ಕೆಲಸಕ್ಕೆ ತೊಂದರೆ ಕೊಡಬೇಡಿ

ಅರಣ್ಯಾಧಿಕಾರಿಗಳ ವರ್ತನೆಯ ವಿಚಾರ ತೀವ್ರ ಚರ್ಚೆಯಾಯಿತು. ಹೀಗಾಗಿ ಸಭೆಯಲ್ಲಿಯೇ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಮುಖ್ಯಸ್ಥರಿಗೆ ದೂರವಾಣಿ ಕರೆ ಮಾಡಿದ ಸಂಸದ ಕೋಟ, ನಿಮ್ಮದಲ್ಲದ ಅರಣ್ಯಕ್ಕೆ ಸುಮ್ಮನೆ ನೆಪವನ್ನೊಡ್ಡಿ ಅಭಿವೃದ್ಧಿ ಕೆಲಸಕ್ಕೆ ತೊಂದರೆ ಕೊಡಬೇಡಿ. ಕೇಂದ್ರ ಸರ್ಕಾರದ ನೂರಾರು ಕೋಟಿ ರೂ. ಹಣ ವಾಪಾಸ್ಸಾಗದಂತೆ ಎಚ್ಚರ ವಹಿಸಿ. 2026ರ ಮಾರ್ಚ್​ ತಿಂಗಳಿಗೆ ಕುಸುಮ್​ -ಸಿ ಯೋಜನೆಯ ಅನುಷ್ಠಾನದ ಗಡುವು ನೀಡಿದ್ದಾರೆ. ಇನ್ನೂ ಒಂದು ತಿಂಗಳು ಯೋಜನೆ ವಿಸ್ತರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದು, ಮೇ 2026ರ ವರೆಗೆ ವಿಸ್ತರಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ತಿಳಿಸಿದರು.