ರಾಜ್ಯದ ಗ್ರಾಪಂ ಸದಸ್ಯರಿಗೆ ವಿಬಿ-ಜಿ ರಾಮ್-ಜಿ ಯೋಜನೆಯ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಬರೆದ ಅಸತ್ಯದ ಪತ್ರಕ್ಕೆ ಪ್ರತಿಯಾಗಿ ಬರೆದ ಪತ್ರವನ್ನು ಸಂಸದ ಪೂಜಾರಿ ಪ್ರದರ್ಶಿಸಿದರು.
* ವಿಬಿ-ಜಿ ರಾಮ್-ಜಿ ಯೋಜನೆ ಕುರಿತು ಸಂಸದ ಪೂಜಾರಿ ಸ್ಪಷ್ಟನೆ
* ಗ್ರಾಮ ಪಂಚಾಯಿತಿ ಸದಸ್ಯರಿಗೆ ಪ್ರತಿ ಪತ್ರ ರವಾನೆ
ಉಡುಪಿ: ಕೇಂದ್ರ ಸರ್ಕಾರ ಹಿಂದಿನ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯನ್ನು ಪರಿಷ್ಕರಿಸಿ, ದುಡಿಯುವ ಜನರಿಗೆ ಹೆಚ್ಚು ಅವಕಾಶ, ಹೆಚ್ಚು ಆರ್ಥಿಕ ಶಕ್ತಿ ನೀಡಲು ವಿಬಿ-ಜಿ ರಾಮ್-ಜಿ ಹೆಸರಿನಲ್ಲಿ ನೂತನ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದೆ. ದುಡಿಯುವ ವರ್ಗಗಳ ಹಿತಕಾಯಲಿರುವ ಈ ಯೋಜನೆಯ ಕುರಿತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅಪಪ್ರಚಾರ ಮಾಡುತ್ತಿರುವುದಲ್ಲದೆ ಗ್ರಾಪಂ ಸದಸ್ಯರಿಗೆ ಸತ್ಯಕ್ಕೆ ದೂರವಾದ ಮಾಹಿತಿ ಒದಗಿಸಿದ್ದಾರೆ. ಆ ಕುರಿತು ವಾಸ್ತವ ತಿಳಿಸುವುದು ನನ್ನ ಉದ್ದೇಶವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಉಡುಪಿಯ ಪ್ರವಾಸಿ ಮಂದಿರದಲ್ಲಿ ಶನಿವಾರ (ಮಾ.28) ಮಧ್ಯಾಹ್ನ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದುಡಿಯುವ ಜನರಿಗೆ ಹೆಚ್ಚು ಅವಕಾಶ, ಹೆಚ್ಚು ಆರ್ಥಿಕ ಶಕ್ತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದಿನ ಮನರೇಗಾ ಯೋಜನೆಯಲ್ಲಿದ್ದ ಕೆಲವು ತೊಡಕು, ಸಮಸ್ಯೆ ನಿವಾರಿಸಿ ವಿಬಿ-ಜಿ ರಾಮ್-ಜಿ ಹೆಸರಿನಲ್ಲಿ ನೂತನ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ, ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರದ ಈ ಯೋಜನೆಯ ಕುರಿತು ಅಸತ್ಯದ ಮಾಹಿತಿ ಹಾಗೂ 10 ಆರೋಪಗಳನ್ನು ಹೇರಿ ರಾಜ್ಯದ 95 ಸಾವಿರ ಗ್ರಾಪಂ ಸದಸ್ಯರಿಗೆ ಪತ್ರ ಬರೆದಿದ್ದಾರೆ. ಅದು ಅವರ ವೈಯಕ್ತಿಕವೋ ಅಥವಾ ಸರ್ಕಾರದ ಪ್ರತ್ರವೋ ನನಗೆ ತಿಳಿದಿಲ್ಲ ಎಂದರು.
10 ಪ್ರಶ್ನೆ, ಆರೋಪಗಳಿಗೆ ಉತ್ತರ
ಸಚಿವ ಪ್ರಿಯಾಂಕ್ ಅವರು ಗ್ರಾಪಂ ಸದಸ್ಯರಿಗೆ ಬರೆದಿರುವ ಪತ್ರದಲ್ಲಿ 10 ಆರೋಪಗಳ ಪ್ರಶ್ನೆಗಳಿದ್ದು ಅವುಗಳಿಗೆಲ್ಲ ನಾನು ಯೋಜನೆಯ ಸೆಕ್ಷನ್ ಮೂಲಕವಾಗಿಯೇ ಉತ್ತರಿಸಿದ ಪತ್ರ ಸಿದ್ಧಪಡಿಸಿದ್ದು, ನನ್ನ ವ್ಯಾಪ್ತಿಯ ಹಾಗೂ ರಾಜ್ಯದ ಎಲ್ಲ ಗ್ರಾಪಂ ಸದಸ್ಯರಿಗೂ ರವಾನಿಸಲಿದ್ದೇನೆ. ವಿರೋಧ ಪಕ್ಷಗಳೊಂದಿಗೆ ಚರ್ಚಿಸದೆ ಯೋಜನೆ ಜಾರಿಗೊಳಿಸಿದ್ದಾರೆ ಎನ್ನುವುದು ಸತ್ಯಕ್ಕೆ ದೂರ. ಸಾಮಾನ್ಯ ಜನರ ಉದ್ಯೋಗ ಕಸಿಯುತ್ತಿದ್ದಾರೆ ಎಂದು ಉಲ್ಲೇಖಿಸಿರುವುದೂ ಸಹ ಅಸತ್ಯವಾಗಿದೆ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದ 100 ದಿನದ ಕೆಲಸವನ್ನು 125 ದಿನಕ್ಕೆ ಏರಿಸಲಾಗಿದೆ. ಕಾರ್ಮಿಕರಿಗೆ ವಾರ್ಷಿಕವಾಗಿ 17, 500 ರೂ. ಲಭಿಸುತ್ತಿತ್ತು. ಅದನ್ನು ಎನ್ಡಿಎ ಸರ್ಕಾರ 46,250 ರೂ.ಗೆ ಹೆಚ್ಚಿಸಿದೆ. ಆದರೂ ಸಹ ಈ ವಿಚಾರವನ್ನು ಸಿದ್ದರಾಮಯ್ಯ ಸರ್ಕಾರ ಮರೆಮಾಚುವ ಪ್ರಯತ್ನ ನಡೆಸಿದೆ ಎಂದರು.
ಭ್ರಷ್ಟಾಚಾರಕ್ಕೆ ಕಡಿವಾಣ
ಇದೀಗ ಹೊಸದಾಗಿ ಜಾರಿಗೊಂಡ ಉದ್ಯೋಗ ಖಾತ್ರಿಯಲ್ಲಿ ಈ ಮೊದಲಿನಂತೆ ಸುಳ್ಳು ಹೇಳಿ ಅಥವಾ ಕಾಮಗಾರಿಯನ್ನು ನಡೆಸದೆ ಅನುದಾನ ಪಡೆಯಲು ಸಾಧ್ಯವಿಲ್ಲ. ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ರಾಜ್ಯದಲ್ಲಿ ಅವರದೇ ಸರ್ಕಾರದಲ್ಲಿ 669 ಕೋಟಿ ರೂ. ಭ್ರಷ್ಟಾಚಾರ ಆಗಿರುವ ಕುರಿತು ವರದಿ ಬಂದಿದ್ದರೂ ಸಿದ್ದರಾಮಯ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುತ್ತಿದ್ದಾರೆ ಎಂದು ಖರ್ಗೆ ದೂರಿದ್ದಾರೆ. ಕೇಂದ್ರ ಸರ್ಕಾರ ಕಾರ್ಮಿಕರನ್ನು ಲೀಡರ್ಗಳನ್ನಾಗಿ ಪರಿವರ್ತಿಸುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 1,160 ಕೋಟಿ ಮಾನವ ದಿನಗಳ ಉದ್ಯೋಗ ನೀಡಲಾಗಿದ್ದು, ಮೋದಿ ಸರ್ಕಾರ ಬಂದ ಬಳಿಕ 3,210 ಕೋಟಿ ಮಾನವ ದಿನದ ಉದ್ಯೋಗ ನೀಡಲಾಗಿದೆ. ಈ ಹಿಂದೆ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಶೇ.40 ಇದ್ದದು, ಇದೀಗ ಶೇ. 56.73 ಇದೆ. ಆಧಾರ್ ಜೋಡಣೆ 76 ಲಕ್ಷ ಇದ್ದದ್ದು 12 ಕೋಟಿಗೆ ಏರಿದೆ ಎಂದರು.
ಇನ್ನಾದರೂ ವ್ಯರ್ಥ ಪ್ರಯತ್ನ ಕೈಬಿಡಿ
ಯುಪಿಎ ಸರ್ಕಾರದಲ್ಲಿ ಕಾರ್ಮಿಕರಿಗೆ 15 ದಿನದ ಬಳಿಕ ಹಣ ಪಾವತಿ ಆಗುತ್ತಿತ್ತು. ಈಗ 7 ದಿನದಲ್ಲಿ ವೇತನ ಬರುತ್ತಿದೆ. ಈ ಎಲ್ಲ ವಿಚಾರವನ್ನು ಪ್ರಿಯಾಂಕ್ ಖರ್ಗೆ ತಿಳಿದಿದ್ದರೂ ಸಹ ಅಸತ್ಯ ಹೇಳುತ್ತಿದ್ದಾರೆ. ಗ್ರಾಪಂ ಸದಸ್ಯರಿಗೂ ಅಪಪ್ರಚಾರ ಮಾಡುವ ಮೂಲಕ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಕೆಡಿಸಲು ಯತ್ನಿಸುತ್ತಿದ್ದಾರೆ. ಆಯುಷ್ಮಾನ್ ಭಾರತ್, ವಿಶ್ವಕರ್ಮ ಯೋಜನೆ ಸೇರಿದಂತೆ ಕೇಂದ್ರದ ಅನೇಕ ಯೋಜನೆಯನ್ನು ತಡೆಹಿಡಿದಿದೆ. ದೇಶಕಂಡ ಶ್ರೇಷ್ಠ ಪ್ರಧಾನಿ ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ನಿಂದಿಸುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸರಿಯಲ್ಲ. ಪ್ರಿಯಾಂಕ್ ಖರ್ಗೆ ಅನಗತ್ಯ ಅಪಪ್ರಚಾರ ಮಾಡುವುದನ್ನು ನಿಲ್ಲಿಸಲಿ ಎಂದು ಕೋಟ ಪೂಜಾರಿ ಆಗ್ರಹಿಸಿದರು.
ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಮುಂದುವರಿಯುತ್ತಿದ್ದು, ಆ ಪರಿಸ್ಥಿತಿಯ ಗಂಭೀರತೆ ಎದುರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ವಿಶ್ವಾಸ ನೀಡಿದ್ದಾರೆ. ಆದರೆ, ಎಡಪಂಥೀಯ ನಿಲುವಿನ ಕೆಲವರು ದೇಶದಲ್ಲಿ ಮತ್ತೆ ಲಾಕ್ಡೌನ್ ಆಗುತ್ತದೆಂದು ಹೇಳಿದ್ದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಹಾರ್ಮೋಜ್ ಜಲಮಾರ್ಗ ಸಮಸ್ಯೆ ನಿವಾರಣೆ ಆಗಬಹುದು. ಆದರೆ, ಯುದ್ಧ ಮುಂದುವರಿದರೆ ಆ ಪರಿಸ್ಥಿತಿಯ ಗಂಭೀರತೆಯನ್ನು ನಾವು ಎದುರಿಸಲೇಬೇಕಾಗಿದೆ.