ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ.
* ಸಮಸ್ಯೆ ನೀಗಿಸುವಂತೆ ಡಿಸಿಗೆ ಸಂಸದ ಕೋಟ ಪತ್ರ
* ರೈತರ ಹಿತಾಸಕ್ತಿಗೆ ಅಧಿಕಾರಿಗಳಿಂದಲೇ ಧಕ್ಕೆ
ಉಡುಪಿ: ರೈತರಿಗೆ ಸೋಲಾರ್ ಮೂಲಕ ವಿದ್ಯುತ್ ಒದಗಿಸುವ ಕೇಂದ್ರ ಸರ್ಕಾರದ ಪಿಎಂ ಕುಸುಮ್-ಸಿ ಯೋಜನೆಯು ಅರಣ್ಯ ಇಲಾಖೆಯ ಅಧಿಕಾರಿಗಳ ಗೊಂದಲದಿಂದಾಗಿ ನನೆಗುದಿಗೆ ಬಿದ್ದಿದೆ. ರೈತರ ಹಿತಾಸಕ್ತಿ ಕಾಪಾಡುವ ಯೋಜನೆ ಇದಾಗಿದ್ದು, ಉಡುಪಿ ಜಿಲ್ಲೆಯಲ್ಲಿ ತ್ವರಿತ ಅನುಷ್ಠಾನಗೊಳಿಸಬೇಕಿದೆ. ಈ ವಿಚಾರವಾಗಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸಮಸ್ಯೆ ನೀಗಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದಿದ್ದಾರೆ.
ಉಡುಪಿಯ ಜಿಪಂನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮೇ 2ರಂದು ನನ್ನ ಅಧ್ಯಕ್ಷತೆಯಲ್ಲಿ ನಡೆದಿದ್ದ ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕುಸುಮ್-ಸಿ ಯೋಜನೆಯ ತ್ವರಿತ ಅನುಷ್ಠಾನ ಮಾಡುವಂತೆ ಚರ್ಚಿಸಲಾಗಿತ್ತು. ಸುಮಾರು 20 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಕಂದಾಯ ಇಲಾಖೆ ನಿವೇಶನ ಗುರುತಿಸಿ ಆದೇಶ ಹೊರಡಿಸಿದ್ದರೂ ಅರಣ್ಯ ಇಲಾಖೆಯು ಹಠಮಾರಿತನ ಪ್ರದರ್ಶಿಸುತ್ತಿದ್ದು, ತಕ್ಷಣ ಈ ಸಮಸ್ಯೆ ಬಗೆಹರಿಸಿ ಯೋಜನೆ ಅನುಷ್ಠಾನ ಮಾಡಲು ನಿರ್ಣಯಿಸಲಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅನುಮತಿ ನೀಡದ ಇಲಾಖೆ
ಪ್ರಧಾನಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾ ಅಭಿಯಾನ ಯೋಜನೆಗಾಗಿ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದಲ್ಲಿ 13 ಎಕರೆ, ಬ್ರಹ್ಮಾವರ ತಾಲೂಕಿನ ಕಾವಡಿ ಗ್ರಾಮದಲ್ಲಿ 5 ಎಕರೆ, ಕಾಪು ತಾಲೂಕಿನ ಬೆಳ್ಳೆ ಗ್ರಾಮದಲ್ಲಿ 9 ಎಕರೆ ಜಾಗ ಮೀಸಲಿಡಲಾಗಿದೆ. ಕಂದಾಯ ಇಲಾಖೆ ಜಾಗ ಗುರುತಿಸಿ, ಮೆಸ್ಕಾಂಗೆ ವರ್ಗಾಯಿಸುವ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗೊಂದಲ ನಿರ್ಮಿಸಿ ಸಮಸ್ಯೆ ಸೃಷ್ಟಿ ಮಾಡಿದ್ದಾರೆ. ಕಿರಿಮಂಜೇಶ್ವರ ಮತ್ತು ಬೆಳ್ಳೆ ಗ್ರಾಮದಲ್ಲಿ ಜಾಗ ಸಮತಟ್ಟು ಮಾಡುವ ಮೊದಲು ಅಲ್ಲಿದ್ದ ಅಕೇಶಿಯಾ ಗಿಡ ಕಡಿಯಲು ಗ್ರಾಪಂನಿಂದ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಡೀಮ್ಡ್ ಫಾರೆಸ್ಟ್ ಎಂದು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ ಎಂದು ಪತ್ರದಲ್ಲಿ ಕೋಟ ತಿಳಿಸಿದ್ದಾರೆ.
ಸಚಿವರಿಗೂ ಪತ್ರ, ಮಾತುಕತೆ
ಜಿಲ್ಲೆಯ ಅರಣ್ಯಾಧಿಕಾರಿಗಳ ವರ್ತನೆ ಕುರಿತಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೂ ಪತ್ರ ಬರೆದಿದ್ದೇನೆ. ದೂರವಾಣಿಯ ಮೂಲಕ ಮಾತನಾಡಿ ಮಾಹಿತಿ ಒದಗಿಸಿದ್ದೇನೆ. ಸಂಬಂಧಿತ ಜಿಲ್ಲೆಯ ಅರಣ್ಯ ಅಧಿಕಾರಿಗಳಿಗೂ ಸೂಚಿಸಿದ್ದೇನೆ. ಆದರೆ, ಎಲ್ಲರೂ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ತಾವು ತಕ್ಷಣ ಜಿಲ್ಲಾ ಮಟ್ಟದ ಸಮಿತಿ ರಚಿಸಿ ಕೇಂದ್ರ ಸರ್ಕಾರದ ಕುಸುಮ್-ಸಿ ಯೋಜನೆ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಸಂಸದ ಕೋಟ ಜಿಲ್ಲಾಧಿಕಾರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
"
ದಿಶಾ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಸಹಾಯಕ ಕಮಿಷನರ್ ಅವರು ಆ ಜಾಗ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರುತ್ತಿಲ್ಲ ಎಂದು ಸ್ಪಷ್ಟಪಡಿಸಿದರೂ ಅರಣ್ಯ ಇಲಾಖೆಯವರು ಒಪ್ಪುತ್ತಿಲ್ಲ. ಕೇಂದ್ರ ಸರ್ಕಾರದ ಯೋಜನೆಯ ಅನುಷ್ಠಾನಕ್ಕೆ ಅವರು ವಿನಾಕಾರಣ ವಿಳಂಬ ಮಾಡಿ, ಅನುದಾನ ವಾಪಾಸ್ ಹೋಗುವ ಸಮಸ್ಯೆ ಸೃಷ್ಟಿ ಮಾಡಿದ್ದಾರೆ. ರೈತರಿಗೆಂದು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕುಸುಮ್-ಸಿ ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ.
— ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.