ಉಡುಪಿಯಲ್ಲಿ ಆಯೋಜಿಸಿದ್ದ ಎಚ್​ಪಿವಿ ಅಭಿಯಾನವನ್ನು ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಡಾ. ಜಿ.ಎಸ್​. ಚಂದ್ರಶೇಖರ್​, ಡಾ. ಬಸವರಾಜ್​ ಹುಬ್ಬಳ್ಳಿ, ದಿನಕರ್​ ಹೇರೂರು, ಡಾ. ಯಲ್ಲಮ್ಮ, ಡಾ. ಎಚ್​.ಅಶೋಕ್​, ಡಾ. ವಾಸುದೇವ, ಪ್ರಿಯಾ ಎಂ., ಡಾ. ಜ್ಯೋತ್ಸ್ನಾ ಬಿ.ಕೆ. ಇದ್ದರು. 
ಉಡುಪಿ

ದೇಶದ ಬೆಳವಣಿಗೆಗೆ 'ಎಚ್​ಪಿವಿ' ಲಸಿಕೆ ಮೈಲಿಗಲ್ಲು

* ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ 

* ಗರ್ಭಕಂಠ ಕ್ಯಾನ್ಸರ್​ ತಡೆಯ ಅಭಿಯಾನ ಉದ್ಘಾಟನೆ

ಉಡುಪಿ: ಆರೋಗ್ಯವಂತ ರಾಷ್ಟ್ರದ ಉದಯವು ಆರೋಗ್ಯವಂತ ಮಹಿಳೆಯರಿಂದ ಆರಂಭವಾಗುತ್ತದೆ. ಆದರೆ, ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಗರ್ಭಕಂಠ ಕ್ಯಾನ್ಸರ್​ನಿಂದ ರಾಷ್ಟ್ರದ ಉನ್ನತಿಗೆ ತೊಡಕಾಗುತ್ತದೆ. ಹಾಗಾಗಿ ಹೆಣ್ಣು ಮಕ್ಕಳ ಆರೋಗ್ಯ ಸದೃಢವಾಗಿ ರಕ್ಷಿಸುವ ನಿಟ್ಟಿನಲ್ಲಿ ಎಚ್​ಪಿವಿ ಲಸಿಕೆ ಸಹಕಾರಿಯಾಗಿದೆ. ಈ ಅಭಿಯಾನವು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಉಡುಪಿ ಬ್ರಹ್ಮಗಿರಿಯಲ್ಲಿರುವ ಸೈಂಟ್​ ಸಿಸಿಲಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಆಶ್ರಯದಲ್ಲಿ ಶುಕ್ರವಾರ (ಮಾ.13) ಆಯೋಜಿಸಿದ್ದ ಎಚ್​ಪಿವಿ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಮಾರಣಾಂತಿಕ ಕಾಯಿಲೆಯಲ್ಲ

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜಿ.ಎಸ್​. ಚಂದ್ರಶೇಖರ್​ ಮಾತನಾಡಿ, ಕ್ಯಾನ್ಸರ್​ ಮಾರಣಾಂತಿಕ ಕಾಯಿಲೆಯಲ್ಲ. ಕ್ಯಾನ್ಸರ್​ ಸೇರಿದಂತೆ ಯಾವುದೇ ರೋಗಗಳ ಲಕ್ಷಣ ಕಂಡುಬಂದಲ್ಲಿ ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಆರೋಗ್ಯಯುತ ಜೀವನ ನಡೆಸಬಹುದು. ಗರ್ಭಕಂಠ ಕ್ಯಾನ್ಸರ್​ ನಿವಾರಣೆಗಾಗಿ ದೇಶಾದ್ಯಂತ ಆರಂಭಗೊಂಡಿರುವ ಎಚ್​ಪಿವಿ ಲಸಿಕಾ ಅಭಿಯಾನ ಯಶ ಕಾಣಲಿ ಎಂದು ಶುಭಹಾರೈಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ್​ ಹುಬ್ಬಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್​ ಹೇರೂರು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ, ಜಿಲ್ಲಾ ಸರ್ಜನ್​ ಡಾ. ಎಚ್​.ಅಶೋಕ್​, ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ, ಸೈಂಟ್​ ಸಿಸಿಲಿ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿಸ್ಟರ್​ ಪ್ರಿಯಾ ಎಂ., ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸಂಸ್ಥೆಯ ಅಧ್ಯಾಪಕರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಜಿಲ್ಲಾ ಆರ್​ಸಿಎಚ್​ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್​ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಲಾ ವಂದಿಸಿದರು.

ಜಿಲ್ಲೆಗೆ 4,150 ಲಸಿಕೆ ಸರಬರಾಜು

ಹ್ಯೂಮನ್​ ಪ್ಯಾಪಿಲೋಮಾ ವೈರಸ್​ನಿಂದಾಗಿ ಗರ್ಭಕಂಠ ಸೇರಿದಂತೆ ಅನೇಕ ರೀತಿಯ ಕ್ಯಾನ್ಸರ್​ ಹರಡುತ್ತದೆ. ಪ್ರಮುಖವಾಗಿ ಮಹಿಳೆಯರಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್​ ತಡೆಗಟ್ಟಲು ಎಚ್​ಪಿವಿ ಲಸಿಕಾ ಅಭಿಯಾನಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ದೇಶದಲ್ಲಿ 14 ವರ್ಷ ತುಂಬಿದ ಹಾಗೂ 15 ವರ್ಷದೊಳಗಿನ 1.15 ಕೋಟಿ ಹೆಣ್ಣು ಮಕ್ಕಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿ ಲಸಿಕೆ ನೀಡಲಾಗುವುದು. ರಾಜ್ಯದಲ್ಲಿ 6,89,620 ಅರ್ಹರನ್ನು ಗುರುತಿಸಲಾಗಿದ್ದು, ಈಗಾಗಲೇ ಆಯಾ ಜಿಲ್ಲಾ ಕೇಂದ್ರಕ್ಕೆ 2.54 ಲಕ್ಷ ಲಸಿಕೆ ರವಾನಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 11,274 ಮಕ್ಕಳನ್ನು ಗುರುತಿಸಲಾಗಿದ್ದು, 4,150 ಲಸಿಕೆ ಈಗಾಗಲೇ ಸರಬರಾಜಾಗಿದೆ ಎಂದು ಸಂಸದ ಕೋಟ ಪೂಜಾರಿ ಮಾಹಿತಿ ನೀಡಿದರು.
"

ಎಚ್​ಪಿವಿ ಲಸಿಕೆಯಿಂದ ಆರೋಗ್ಯದಲ್ಲಿ ವ್ಯತ್ಯಯ, ಅಡ್ಡಪರಿಣಾಮ ಆಗದು ಎನ್ನುವುದನ್ನು ಮತ್ತು ಪ್ರಯೋಜನದ ಕುರಿತಾಗಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಅರಿವು ಮೂಡಿಸಬೇಕು. ಲಸಿಕೆ ಪಡೆದ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳಿಗೂ ಪ್ರೇರೇಪಿಸಬೇಕು. ಹೆಣ್ಣು ಮಕ್ಕಳು ಆರೋಗ್ಯಪೂರ್ಣ ಬದುಕು ಸಾಗಿಸಲು ಎಲ್ಲರೂ ಅವಕಾಶ ಮಾಡಿಕೊಡಬೇಕು.