ಉಡುಪಿ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಸ್ವರೂಪಾ ಟಿ.ಕೆ., ರಾಹುಲ್, ದುರ್ಗಾಪ್ರಸಾದ್, ಸುಬ್ರಹ್ಮಣ್ಯ, ಪ್ರಿನ್ಸ್ ಲಾರೆನ್ಸ್, ಪ್ರಕಾಶ್ ಇದ್ದರು.
* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹ
* ಅದಾನಿ ಸಂಸ್ಥೆಯ ಅಧಿಕಾರಿಗಳಿಗೆ ತರಾಟೆ
* ವಿಳಂಬ ಧೋರಣೆಗೆ ಸಭೆಯಲ್ಲಿ ಆಕ್ರೋಶ
ಉಡುಪಿ: ಜಿಲ್ಲೆಯಲ್ಲಿ ಮನೆಮನೆಗೆ ಪೈಪ್ಲೈನ್ ಮೂಲಕ ಗ್ಯಾಸ್ ವಿತರಣೆಯ ಯೋಜನೆ ಆರೇಳು ವರ್ಷದಿಂದ ನನೆಗುದಿಗೆ ಬಿದ್ದಿದೆ. ಪಣಂಬೂರಿನಿಂದ ಕರಾವಳಿ ಜಂಕ್ಷನ್ ವರೆಗೆ 48 ಕಿಮೀ ಹಾಗೂ ಕರಾವಳಿ ಜಂಕ್ಷನ್ನಿಂದ ಮಣಿಪಾಲದ ಕಾಯಿನ್ ಸರ್ಕಲ್ವರೆಗೆ ಪೈಪ್ಲೈನ್ ಸಂಪರ್ಕವೂ ಆಗಿದೆ. ಆದರೂ ಗ್ಯಾಸ್ ಪೂರೈಕೆಗೆ ಏಕೆ ವಿಳಂಬ ಮಾಡುತ್ತಿದ್ದೀರಿ? ನವೆಂಬರ್ ಮೊದಲ ವಾರದೊಳಗೆ ಮನೆಮನೆಗೆ ಗ್ಯಾಸ್ ವಿತರಣೆ ಆರಂಭಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಅದಾನಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಗುರುವಾರ (ಸೆ.27) ಸಭೆ ನಡೆಸಿ, ಈ ಹಿಂದಿನಿಂದ ಚರ್ಚಿಸಿದಂತೆ ಸುಮಾರು 25 ಸಾವಿರ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕೊಡಲೇಬೇಕು. ಇನ್ನು ವಿಳಂಬ ಸಹಿಸಲಾಗದು ಎಂದು ತರಾಟೆಗೆ ತೆಗೆದುಕೊಂಡರು.
ಕಾಮಗಾರಿಗೆ ನಗರಸಭೆ ತಡೆ
ಅದಾನಿ ಕಂಪನಿಯ ಯೋಜನಾ ಅನುಷ್ಠಾನದ ಅಧಿಕಾರಿ ರಾಹುಲ್ ಮಾತನಾಡಿ, ಸುಮಾರು 2 ಸಾವಿರ ಕುಟುಂಬಗಳಿಗೆ ಪ್ರಥಮ ಹಂತದಲ್ಲಿ ಪೈಪ್ಲೈನ್ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸಲು ಯೋಜಿಸಲಾಗಿತ್ತು. ಒಟ್ಟು 300 ಕಿಮೀ ವ್ಯಾಪ್ತಿಯ ಪೈಪ್ಲೈನ್ ವಿಸ್ತರಣಾ ಜಾಲವು ಈ ಯೋಜನೆಯ ಗುರಿಯಾಗಿದೆ. ಈಗಾಗಲೇ 200 ಕಿಮೀವರೆಗೆ ಪೂಪ್ಲೈನ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ನಗರಸಭಾ ಅಧಿಕಾರಿಗಳು ಮಳೆಗಾಲದಲ್ಲಿ ಕಾಮಗಾರಿ ನಿಲ್ಲಿಸಲು ಸೂಚಿಸಿದ್ದಾರೆ. ಹೀಗಾಗಿ ಅಕ್ಟೋಬರ್ನಲ್ಲಿ ಮತ್ತೆ ಬಾಕಿ ಕಾಮಗಾರಿ ಆರಂಭಿಸಿ, ನವೆಂಬರ್ ಪ್ರಥಮ ವಾರದಲ್ಲಿ ಮನೆಮನೆಗೆ ಗ್ಯಾಸ್ ಸಂಪರ್ಕ ನೀಡುವುದಾಗಿ ತಿಳಿಸಿದರು.
ಡಿಸಿ ಸ್ವರೂಪಾ ಸೂಚನೆ
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನಕ್ಕೆ ವಿಳಂಬ ಸಲ್ಲದು. ಸಂಸದ ಪೂಜಾರಿ ಅವರ ಮಾರ್ಗದರ್ಶನದಂತೆ ತಕ್ಷಣ ಕಾಮಗಾರಿ ಕೈಗೊಳ್ಳಬೇಕು. ನವೆಂಬರ್ ಪ್ರಥಮ ವಾರದಲ್ಲಿ ಗ್ಯಾಸ್ ಸಂಪರ್ಕ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ನಗರಸಭೆಯ ಕಾರ್ಯಪಾಲಕ ಅಭಿಯಂತ ದುರ್ಗಾಪ್ರಸಾದ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಗೇಲ್ ಕಂಪನಿಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಪ್ರಿನ್ಸ್ ಲಾರೆನ್ಸ್, ಆಹಾರ ನಾಗರಿಕ ಸರಬರಾಜು ಇಲಾಖೆಯ ಮ್ಯಾನೇಜರ್ ಪ್ರಕಾಶ್ ಉಪಸ್ಥಿತರಿದ್ದರು.
ಗೇಲ್ ಸಂಸ್ಥೆಯು ಅನಿಲ ಸರಬರಾಜು ವ್ಯವಸ್ಥೆಯ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಅಲ್ಲದೆ, ಪಣಂಬೂರಿನಲ್ಲಿಯೂ ಗ್ಯಾಸ್ ವಿತರಣಾ ವ್ಯವಸ್ಥೆಯ ಯೋಜನೆ ಪೂರ್ಣಗೊಂಡಿದೆ. ಹೀಗಾಗಿ ಜಿಲ್ಲೆಯಲ್ಲಿ ಬಳಕೆಯಿರುವ ಸಿಎನ್ಜಿ ವಿತರಣಾ ಕೇಂದ್ರಗಳಿಗೆ ಸರಿಯಾದ ಸಮಯದಲ್ಲಿ ಗ್ಯಾಸ್ ಪೂರೈಸಬೇಕು. ಅಲ್ಲದೆ, ಅರ್ಜಿ ಹಾಕಿದ ಇತರ ವಿತರಣಾ ಸಂಸ್ಥೆಗಳಿಗೂ ಗ್ಯಾಸ್ ಸಂಪರ್ಕ ನೀಡಬೇಕು.
— ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.