ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ.
* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಮತ
* ಮಲ್ಲಿಕಾರ್ಜುನ ಖರ್ಗೆ ವಿವಾದಾಸ್ಪದ ಹೇಳಿಕೆಗೆ ಅಸಮಾಧಾನ
ಉಡುಪಿ: ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಹಿರಿತನವನ್ನು ನಾವು ಗೌರವಿಸುತ್ತೇವೆ. ಆದರೆ, ಸಮಾರಂಭವೊಂದರಲ್ಲಿ ಅವರು ಆರ್ಎಸ್ಎಸ್ ಕುರಿತಾಗಿ ಅತ್ಯಂತ ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಆರ್ಎಸ್ಎಸ್ ಅಂದರೆ ವಿಷದ ಹಾವಿದ್ದಂತೆ. ಅದನ್ನು ಹೊಡದು ಕೊಲ್ಲಬೇಕು ಅಂದಿರುವುದು ಹಿಂದೂ ಸಮಾಜಕ್ಕೆ ಮಾಡಿದ ಅವಮಾನವಾಗಿದೆ. ಸಮಸ್ತ ಭಾರತದಲ್ಲಿ ಹಿಂದೂಪರ ಧ್ವನಿ ಎತ್ತಬಲ್ಲ ಶ್ರೇಷ್ಠ ಸಂಘಟನೆ ಆರ್ಎಸ್ಎಸ್ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಆರ್ಎಸ್ಎಸ್ ಅಂದರೆ ಸಮಾಜದ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಾಗಿದೆ. ಪ್ರಮುಖವಾಗಿ ಹಿಂದೂ ಸಮಾಜಕ್ಕೆ ನ್ಯಾಯ ಕೇಳುವ ಸಂಘಟನೆಯಾಗಿದೆ. ರಾಷ್ಟ್ರೀಯತೆಯ ಪ್ರತಿಬಿಂಬವಾಗಿರುವ ಸಂಘವನ್ನು ಖರ್ಗೆಯವರು ಹಾವಿಗೆ ಹೋಲಿಸಿ, ಕೊಲ್ಲಬೇಕು ಎಂದಿರುವುದು ಸಮಸ್ತ ಹಿಂದೂ ಸಮಾಜಕ್ಕೆ ಹಾಕಿದ ಬೆದರಿಕೆಯಾಗಿದೆ. ಅಂತಹ ಹಿರಿಯ ರಾಜಕಾರಣಿಯಿಂದ ಇಂತಹ ಮಾತು ಯಾರಿಗೂ ನಿರೀಕ್ಷೆ ಇರಲಿಕ್ಕಿಲ್ಲ. ಅವರ ಮಾತಿಗೆ ಇನ್ಯಾವುದೇ ರೀತಿಯ ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.
ಚುನಾವಣೆಯಲ್ಲಿ ಬಿಜೆಪಿಗೇ ಗೆಲುವು
ಕೇರಳ ಹಾಗೂ ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವಾಗಲಿದೆ. ಕೇರಳದಲ್ಲಿ ಈ ಬಾರಿ ಬಹು ದೊಡ್ಡ ಗೆಲುವು ಲಭಿಸಲಿದ್ದು, ಅಲ್ಲಿ ನಿರ್ಣಾಯಕ ಶಕ್ತಿ ಆಗಲಿದೆ. ಕರ್ನಾಟಕದ ಬಾಗಲಕೋಟೆ ಹಾಗೂ ದಾವಣಗೆರೆ ಎರಡೂ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಖಚಿತ. ಈ ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡಿದ್ದು, ಕಾಂಗ್ರೆಸ್ ವಿರೋಧಿ ಅಲೆ ಇದೆ. ಕೇಂದ್ರ ಬಿಜೆಪಿ ಸರ್ಕಾರದ ಜನಪರ ಕೆಲಸವನ್ನು ಜನರು ಮೆಚ್ಚಿಕೊಂಡಿದ್ದಾರೆ. ದೇಶದ ಸಮಗ್ರತೆ ಮತ್ತು ಭದ್ರತೆಗೆ ಬದ್ಧವಾಗಿರುವ ಬಿಜೆಪಿಗೆ ಮತ ಹಾಕುತ್ತಾರೆ. ಮೂರು ವರ್ಷದ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದ ಅನಾಹುತಗಳನ್ನೂ ಜನ ಗಮನಿಸಿದ್ದಾರೆ ಎಂದು ಕೋಟ ಪೂಜಾರಿ ತಿಳಿಸಿದರು.