ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಶನಿವಾರ ನಡೆದ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು.  
ಉಡುಪಿ

ಮೂಡುಬಿದಿರೆ ಆಳ್ವಾಸ್ ಕಾಲೇಜು ಚಾಂಪಿಯನ್ಸ್

ಸುಳ್ಯ: ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಸಹಯೋಗದೊಂದಿಗೆ ಎಒಎಲ್‌ಇ ಪ್ರಾಯೋಜಕತ್ವದಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಶನಿವಾರ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಪ್ರಥಮ, ಉಜಿರೆ ಎಸ್‌ಡಿಎಂ ಕಾಲೇಜು ದ್ವಿತೀಯ ಹಾಗೂ ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಪ್ರಥಮ, ಉಜಿರೆ ಎಸ್‌ಡಿಎಂ ಕಾಲೇಜು ದ್ವಿತೀಯ ಹಾಗೂ ಬೆಳ್ತಂಗಡಿ ಸರ್ಕಾರಿ ಪದವಿ ಕಾಲೇಜು ತೃತೀಯ ಸ್ಥಾನ ಗಳಿಸಿತು. ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಕಾಲೇಜುಗಳ 260 ಕ್ರೀಡಾಪಟುಗಳು ಭಾಗವಹಿಸಿದ್ದರು.
ಎಒಎಲ್‌ಇಯ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಗುಡ್ಡಗಾಡು ಓಟಕ್ಕೆ ಚಾಲನೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ, ಸುಳ್ಯ ಎಒಎಲ್‌ಇ ಕಾರ್ಯದರ್ಶಿ ಹೇಮನಾಥ ಕೆ.ವಿ., ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ.ಎಂ., ಪ್ರೊ.ದಾಮೋದರ ಗೌಡ ಕೆ.ವಿ., ಚಂದ್ರಶೇಖರ ಪೇರಾಲು, ಕೆ.ಟಿ.ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.