ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್​ ಅರ್ಷದ್​  
ಉಡುಪಿ

ಆಡಳಿತಕ್ಕೆ ವೇಗ ನೀಡಲು ಬೆಂಗಳೂರಿನಲ್ಲಿ ಮಾಸಿಕ ಉನ್ನತ ಸಭೆ: ಸಚಿವ ರಿಜ್ವಾನ್​

ಉಡುಪಿ: ಜಿಲ್ಲೆಯಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯ ನಡೆಸಲು ಹಾಗೂ ಆಡಳಿತಕ್ಕೆ ಹೊಸ ವೇಗ ನೀಡಲು ಜಿಲ್ಲೆಯಿಂದ ಕಳುಹಿಸಲಾದ ಪ್ರಸ್ತಾವನೆಗಳು ಬೆಂಗಳೂರು ಹಂತದಲ್ಲಿ ವಿಳಂಬವಾಗುವುದನ್ನು ತಡೆಯಲು ಬೆಂಗಳೂರು ಮತ್ತು ಉಡುಪಿ ಎರಡೂ ಕಡೆಗಳಲ್ಲೂ ನಿರಂತರ ಪಾಲೋ ಅಪ್​ ಹಾಗೂ ರಿವ್ಯೂ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್​ ಅರ್ಷದ್​ ತಿಳಿಸಿದರು.

ಕೆಡಿಪಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮತ್ತು ಸಚಿವಾಲಯದ ಹಂತದಲ್ಲಿ ತೀಮಾರ್ನವಾಗಬೇಕಾದ ಪ್ರಸ್ತಾವನೆಗಳು ಹಾಗೂ ನೀತಿ ನಿರ್ಧಾರಗಳ ನಿರಂತರ ಫಾಲೋ ಅಪ್​ಗಾಗಿ ತಿಂಗಳಿಗೆ ಒಮ್ಮೆ ಉನ್ನತಾಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗುವುದು ಎಂದು ತಿಳಿಸಿದರು.

ಪ್ರತಿ ಬಾರಿ ಜಿಲ್ಲೆಗೆ ಆಗಮಿಸಿದಾಗ ಕನಿಷ್ಠ ಎರಡು ಇಲಾಖೆಗಳ ಪ್ರತ್ಯೇಕ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು. ಇದರಿಂದ ಕೆಡಿಪಿ ಸಭೆಯ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ಕೆಲಸಗಳು ಶೀಘ್ರವಾಗಿ ಪೂರ್ಣಗೊಳ್ಳಲಿವೆ ಎಂದು ಹೇಳಿದರು.

ಸಾರ್ವಜನಿಕರ ಅಹವಾಲು ಸ್ವೀಕರಿಸುವ 'ಪ್ರಜಾಸೇವೆ' ಕಾರ್ಯಕ್ರಮದ ಮೂಲಕ ವಿವಿಧ ಇಲಾಖೆಗಳ ಕಾರ್ಯವೈಖರಿಯ ಬಗ್ಗೆ ಹಲವು ಪ್ರಮುಖ ಸುಳಿವುಗಳು ಸಿಗುತ್ತಿದ್ದು, ಅದರ ಆಧಾರದ ಮೇಲೆಯೂ ಆಡಳಿತ ಯಂತ್ರವನ್ನು ಚುರುಕುಗೊಳಿಸಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ ಏಳನೇ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದು, ಗ್ರಾಮೀಣ ಹಾಗೂ ಕರಾವಳಿ ಭಾಗಗಳಲ್ಲಿ ಪ್ರವಾಸ ಮಾಡಿದ್ದೇನೆ. ಜಿಲ್ಲಾ ಹಂತದ ಆಡಳಿತವು ಜನಪರ ಹಾಗೂ ಸುಗಮವಾಗಿ ನಡೆಯುವಂತೆ ಗಂಭೀರತೆಯಿಂದ ಜವಾಬ್ದಾರಿ ನಿರ್ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ರಸ್ತೆಗಳ ಅಭಿವೃದ್ಧಿ

ಜಿಲ್ಲೆಯ ಪ್ರಮುಖ ರಸ್ತೆಗಳು ಹಾಗೂ ಉಡುಪಿ ನಗರದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಅವುಗಳ ದುರಸ್ತಿಗೆ ಸಿಎಂಐಡಿಪಿ ಮತ್ತು ವಿಶೇಷ ಅನುದಾನದ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಥಳಿಯ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.

ಜಿಪಂ ಸಿಇಒ ಪ್ರತಿಕ್​ ಬಾಯಲ್​ ಮಾತನಾಡಿ, ಕುಡಿಯುವ ನೀರಿನ ಪೂರೈಕೆ ಹಾಗೂ ಯೋಜನೆಗಳಿಗೆ ಉಡುಪಿ ಜಿಲ್ಲೆಗೆ 7.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಪ್ರತಿ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್​ ಫೋರ್ಸ್​ ಸಮಿತಿಗಳನ್ನು ರಚಿಸಿ, ಗ್ರಾಮೀಣ ನೀರು ಸರಬರಾಜು ಇಲಾಖೆಗೆ ಕಾಮಗಾರಿಗಳ ಜವಾಬ್ದಾರಿಯನ್ನು ನೀಡಲಾಗಿದೆ. ಹೊಸ ಬೋರ್​ವೆಲ್​ ಕೊರೆಯುವುದು, ಕೊಳವೆಬಾವಿ ನಿಮಾರ್ಣ, ಪೈಪ್​ಲೈನ್​ ವಿಸ್ತರಣೆ, ವಿದ್ಯುದ್ದೀಕರಣ, ಹಾಗೂ ಹೊಸ ಬಾವಿಗಳನ್ನು ನಿರ್ಮಿಸುವ ಕಾರ್ಯಗಳು ಈಗಾಗಲೇ ಆರಂಭಗೊಂಡಿವೆ. ಬಾಕಿ ಉಳಿದಿರುವ ಹಾಗೂ ಈ ತಿಂಗಳಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳನ್ನು ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಮೈನರ್​ ಇರಿಗೇಶನ್​ ಅಡಿಯಲ್ಲಿರುವ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕುವ ವ್ಯವಸ್ಥೆ ಮಾಡಲಾಗಿದ್ದು, ಅಂತರ್ಜಲ ಮರುಪೂರಣಗೊಳ್ಳುವಂತೆ ಪ್ರತಿ 15 ದಿನಗಳಿಗೊಮ್ಮೆ ನಿರಂತರವಾಗಿ ಪರಿಶೀಲಿಸಲಾಗುತ್ತಿದೆ. ಭತ್ತದ ಕಟಾವಿನ ಬಳಿಕ ಸಂಪೂರ್ಣವಾಗಿ ಹಲಗೆಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗುತ್ತದೆ. ಜಲಜೀವನ್​ ಮಿಷನ್​ ಅಡಿಯಲ್ಲಿ ಉಡುಪಿಯಲ್ಲಿ ಸುಮಾರು 530ಕ್ಕೂ ಕಾಮಗಾರಿಗಳಿದ್ದು, ಇವುಗಳಿಗೆ ಪೂರಕವಾಗಿ ಕಾರ್ಕಳ ಮತ್ತು ಬೈಂದೂರಿನಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಪ್ರಗತಿಯಲ್ಲಿವೆ. ಮುಂಬರುವ ಬೇಸಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೀರಿಗೆ ಯಾವುದೇ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ಸಮಿತಿಯು ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ ನೀರಿನ ಪರಿಸ್ಥಿತಿಯನ್ನು ಸೂಕ್ಷ್ಮ ವಾಗಿ ಅವಲೋಕಿಸುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಜಿಲ್ಲೆಯಲ್ಲಿ ಅಕ್ಟೋಬರ್​ ಮತ್ತು ನವೆಂಬರ್​ ತಿಂಗಳಲ್ಲಿ ಮಳೆಯಾಗುತ್ತಿರುವುದರಿಂದ ನಗರದಲ್ಲಿ ೆಬ್ರವರಿ ತನಕ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ. ಡಿಸೆಂಬರ್​ ಬಳಿಕ ವಾರಾಹಿ ನೀರು ಸರಬರಾಜಾಗಲಿದೆ ಎಂದು ಹೇಳಿದರು.

ಎಸ್​ಪಿ ಹರಿರಾಂ ಶಂಕರ್​, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗೂರ್​, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮೊದಲಾದವರು ಉಪಸ್ಥಿತರಿದ್ದರು.