ಉಡುಪಿಯ ಇಂದ್ರಾಳಿ ರೈಲು ಗೋದಾಮು ಸಂಪರ್ಕಿಸುವ ರಸ್ತೆಗೆ ಹಾಕಿದ್ದ ತೇಪೆ ಕಿತ್ತುಹೋಗಿ ಮತ್ತೆ ಸೃಷ್ಟಿಯಾದ ಗುಂಡಿಯಲ್ಲಿ ಮಳೆನೀರು ನಿಂತಿರುವುದು. 
ಉಡುಪಿ

ಉಡುಪಿಯಲ್ಲಿ ತಂಪೆರೆದ ವರುಣ

* ದಿನವಿಡೀ ಮೋಡ, ಆಗಾಗ ಮಳೆ

ಉಡುಪಿ: ವಿಶ್ವ ಪರಿಸರಕ್ಕೆ ದಿನಕ್ಕೆ ನಾಂದಿ ಹಾಡುವ ರೀತಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ (ಜೂ.5) ದಿನವಿಡೀ ಮೋಡ ಕವಿದ ವಾತಾವರಣದೊಂದಿಗೆ ಆಗಾಗ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿಯಿತು. 
ಉಡುಪಿ ನಗರದಲ್ಲಿ ಬೆಳಗ್ಗೆ 8:30ರ ವೇಳೆಯಲ್ಲಿ ಮಂದಗತಿಯಲ್ಲಿ ಮಳೆ ಆರಂಭಿಸಿ, 10 ಗಂಟೆಯ ವೇಳೆಗೆ ತುಸು ಬಿರುಸಾಗಿ ಸುರಿಯಿತು. ಬಳಿಕ ಮೋಡ ಕವಿದ ವಾತಾವರಣ ಮುಂದುವರಿದು, ಸಂಜೆ 5 ಗಂಟೆಯ ವೇಳೆಗೆ ಜಿಟಿಜಿಟಿಯಾಗಿ ಜಿನುಗಿತು. ಸಂಜೆ 7 ಗಂಟೆಯ ಬಳಿಕ ಉತ್ತಮವಾಗಿ ಮಳೆ ಸುರಿಯಿತು. ಮಧ್ಯರಾತ್ರಿಯೂ ಸಹ ಉತ್ತಮ ಮಳೆಯಾಯಿತು.

4 ದಿನ ಮಳೆ

ರಾಜ್ಯ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂ.6ರಿಂದ ಜೂ.9ರ ವರೆಗೆ ಗುಡುಗು-ಮಿಂಚು ಸಹಿತ ಭಾರಿ ಪ್ರಮಾಣದಲ್ಲಿ ಮಳೆಯಾಗಲಿದೆ. ಗಂಟೆಗೆ 35ರಿಂದ 40 ಕಿಮೀ. ವೇಗದಲ್ಲಿ ಗಾಳಿಯೂ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಡಲಿನಲ್ಲೂ ಅಬ್ಬರದ ಗಾಳಿ

ಜೂ.6ರಿಂದ ಜೂ.9ರ ವರೆಗೆ ಅರಬ್ಬಿ ಸಮುದ್ರದಲ್ಲೂ ಸಹ ಭಾರಿ ಪ್ರಮಾಣದಲ್ಲಿ ಗಾಳಿ ಬೀಸಲಿದೆ. ಗಂಟೆಗೆ ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು ಅದರ ಪ್ರಭಾವ 65 ಕಿ.ಮೀ.ಯಷ್ಟು ಇರಲಿದೆ. ಹೀಗಾಗಿ ಸಾರ್ವಜನಿಕರು, ಪ್ರವಾಸಿಗರು ಕಡಲಿಗೆ ತೆರಳದಂತೆಯೂ ಸೂಚನೆ ನೀಡಲಾಗಿದೆ.

ಮಳೆ ಮಾಹಿತಿ

ಕಾರ್ಕಳ- 20.09 ಮಿ.ಮೀ., ಕುಂದಾಪುರ- 21.03, ಉಡುಪಿ- 9.03, ಬೈಂದೂರು- 28.07, ಬ್ರಹ್ಮಾವರ- 19.06, ಕಾಪು- 34.07 ಮಿ.ಮೀ., ಹೆಬ್ರಿ- 15.04 ಮಿ.ಮೀ. ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಸರಾಸರಿ 21.03 ಮಿ.ಮೀ. ಮಳೆಯಾಗಿದೆ. 

ಹೊಂಡಮಯವಾದ ನಗರ ರಸ್ತೆಗಳು 

ನಗರದ ಪ್ರಮುಖ ವಾರ್ಡ್​ ಹಾಗೂ ನಗರ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳನ್ನು ಎರಡು ತಿಂಗಳ ಹಿಂದೆ ತೇಪೆ ಹಾಕಿ ಮುಚ್ಚಲಾಗಿತ್ತು. ಇದೀಗ ಮೂರ್ನಾಲ್ಕು ದಿನದಿಂದ ಉಡುಪಿ ನಗರದಲ್ಲಿ ಮಳೆಯಾಗುತ್ತಿರುವುದರಿಂದ ಮಳೆ ನೀರಿನಿಂದಾಗಿ ರಸ್ತೆಗಳಿಗೆ ಹಾಕಿದ ತೇಪೆಗಳೆಲ್ಲವೂ ಕಿತ್ತು ಹೋಗಿ ಮತ್ತೆ ಗುಂಡಿಬಿದ್ದಿದೆ. ಆ ಗುಂಡಿಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಬೈಕ್​ ಸವಾರರು ರಾತ್ರಿ ವೇಳೆ ಬಿದ್ದು ಗಾಯಗೊಳ್ಳುತ್ತಿದ್ದಾರೆ.