ಉಡುಪಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್​ (ಬಿವಿಟಿ)ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮೋಹನ್​ ಭಾಸ್ಕರ್​ ಹೆಗಡೆ ಅಧಿಕಾರ ಸ್ವೀಕರಿಸಿದರು. ವಿನುತಾ ಆಚಾರ್ಯ, ಜಗದೀಶ್​ ಪೈ, ಸುಧೀರ್​ ಕುಲಕರ್ಣಿ, ಮನೋಹರ್​ ಕಟಗೇರಿ ಇದ್ದರು. 
ಉಡುಪಿ

ತಂತ್ರಜ್ಞಾನ ಆಧಾರಿತ ಕಾಯಕಕ್ಕೆ ಆದ್ಯತೆ

* ಮೋಹನ್​ ಭಾಸ್ಕರ್​ ಹೆಗಡೆ ಭರವಸೆ

* ಬಿವಿಟಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅಧಿಕಾರ ಸ್ವೀಕಾರ

ಉಡುಪಿ: ಸುದೀರ್ಘ ಇತಿಹಾಸ ಹೊಂದಿರುವ ಭಾರತೀಯ ವಿಕಾಸ ಟ್ರಸ್ಟ್​ (ಬಿವಿಟಿ)ನ ತರಬೇತಿ, ಕೃಷಿ ಪ್ರಯೋಗ, ಮಹಿಳಾ ಸಬಲೀಕರಣ ಮತ್ತು ಯುವ ಜನತೆಯ ಸ್ವಾವಲಂಬನೆಯಲ್ಲಿ ಇನ್ನೂ ಗಮನಾರ್ಹ ಕೆಲಸ ಮಾಡಬೇಕಿದೆ. ನಮ್ಮ ನಂತರವೂ ಸಹ ಮಹತ್ವದ ನೂರಾರು ಜ್ಞಾನವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಪ್ರಯತ್ನವೂ ಆಗಬೇಕಿದೆ. ಆ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಅಳವಡಿಸಿ ಹೊಸ ಬಗೆಯ ಕಾಯಕ ರೂಪಿಸಲಾಗುವುದು ಎಂದು ಮೋಹನ್​ ಭಾಸ್ಕರ್​ ಹೆಗಡೆ ತಿಳಿಸಿದರು.
ಉಡುಪಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್​ನ ಕಚೇರಿಯಲ್ಲಿ ಶನಿವಾರ (ಜೂ.20) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಬಿವಿಟಿ ಆಡಳಿತ ಟ್ರಸ್ಟಿ ವಿನುತಾ ಆಚಾರ್ಯ ಮಾತನಾಡಿ, ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಮೋಹನ್​ ಹೆಗಡೆ ಅವರ ನೇತೃತ್ವದಲ್ಲಿ ಸಂಸ್ಥೆಯ ಚಟುವಟಿಕೆಗಳು ಇನ್ನಷ್ಟು ವಿಸ್ತಾರಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.
ಟ್ರಸ್ಟ್​ನ ಹಿರಿಯ ಸಲಹೆಗಾರ ಜಗದೀಶ್​ ಪೈ ಮಾತನಾಡಿ, ಬಿವಿಟಿಯ ಅಭಿವೃದ್ಧಿಯ ಪಯಣದಲ್ಲಿ ಎಲ್ಲ ಹಿತೈಷಿಗಳು ಹಾಗೂ ಸಿಬ್ಬಂದಿ ಸಹಕಾರ ಮಹತ್ವದ್ದಾಗಿದೆ. ಇದೀಗ ಮೋಹನ್​ ಹೆಗಡೆ ಅವರ ನೇತೃತ್ವ ಸಿಬ್ಬಂದಿಗಳಿಗೆ ಹೆಚ್ಚಿನ ಉತ್ಸಾಹ ತುಂಬಿದೆ ಎಂದರು.
ಸೆಲ್ಕೋ ಸಂಸ್ಥೆಯ ನಿವೃತ್ತ ಅಧಿಕಾರಿಗಳಾದ ಸುಧೀರ್​ ಕುಲಕರ್ಣಿ, ಸುರೇಶ್​ ಸಾವಳಗಿ, ಸಂಸ್ಥೆಯ ಮನೋಹರ್​ ಕಟಗೇರಿ ಉಪಸ್ಥಿತರಿದ್ದರು.  
ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ನಿರೂಪಿಸಿದರು. ಹಣಕಾಸು ವಿಭಾಗದ ಹಿರಿಯ ವ್ಯವಸ್ಥಾಪಕ ಕೃಷ್ಣದಾಸ್​ ವಂದಿಸಿದರು. ಬಿವಿಟಿಯ ಸಿಬ್ಬಂದಿ ಪಾಲ್ಗೊಂಡಿದ್ದರು.