ಉಡುಪಿಯಲ್ಲಿ ಆಯೋಜಿಸಿದ್ದ ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯಕ್ರಮವನ್ನು ಸುಗುಣೇಂದ್ರ ಶ್ರೀ ಉದ್ಘಾಟಿಸಿದರು. ಸುಶ್ರೀಂದ್ರ ಶ್ರೀ, ಚಾರುಕೀರ್ತಿ ಭಟ್ಟಾರಕ ಶ್ರೀ, ವಿಲಿಯಂ ಎಫ್. ವೆಂಡ್ಲೆ, ಯಶ್ಪಾಲ್ ಸುವರ್ಣ, ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಇತರರಿದ್ದರು.
* ಸುಗುಣೇಂದ್ರ ತೀರ್ಥ ಶ್ರೀಪಾದರ ಶ್ಲಾಘನೆ
* ಆಳ್ವಾಸ್ ನುಡಿಸಿರಿ ವಿರಾಸತ್ ಉದ್ಘಾಟನೆ
ಉಡುಪಿ: ನಮ್ಮ ವಿಶ್ವಗಿತಾ ಚತುರ್ಥ ಪರ್ಯಾಯದ ಕೊನೆಯ ಹಂತದಲ್ಲಿ ಹಾಗೂ ವಿಶ್ವ ಶಾಂತಿ ಸಮ್ಮೇಳನದ ನಿಮಿತ್ತ ಮೇರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀಕೃಷ್ಣನಿಗೆ ಅರ್ಪಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೇ ಆಳ್ವಾಸ್ ನುಡಿಸಿರಿ ವಿರಾಸತ್ ಶ್ರೇಷ್ಠವಾದುದಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೋಹನ ಆಳ್ವಾ ಆಳುತ್ತಿದ್ದಾರೆ. ಅವರು ಭಾರತದ ಸಾಂಸ್ಕೃತಿಕ ರಾಯಭಾರಿ. ನಮ್ಮ ದೇಶದ ಕಲೆ, ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣ ಸಮೀಪದ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಶ್ರೀ ವಿಶ್ವೇಷ ತೀರ್ಥ ಶ್ರೀಪಾದ ವೇದಿಕೆಯಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕ ಶನಿವಾರ ಸಂಜೆ (ಡಿ.13) ಆಯೋಜಿಸಿದ್ದ ಮೂಡುಬಿದಿರೆಯ ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಕಲೆಯ ರಕ್ಷಣೆ ಉದ್ದೇಶ
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವಾ ಮಾತನಾಡಿ, ಮೂಡಬಿದಿರೆಗೆ ಸೀಮಿತವಾಗಿ ಆರಂಭಗೊಂಡಿದ್ದ ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ಇಂದು ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಇದು ಮನರಂಜನೆಗಷ್ಟೇ ಸೀಮಿತವಾಗಿಲ್ಲ. ಭಾರತದಲ್ಲಿ ಇರುವಷ್ಟು ಕಲೆ, ಪರಂಪರೆ ಬೇರಾವುದೇ ದೇಶದಲ್ಲಿ ಇಲ್ಲ. ಅಂತಹ ದೇಸೀಯ ಸಾಂಸ್ಕೃತಿಕ, ಜಾನಪದೀಯ ಕಲೆಯನ್ನು ರಕ್ಷಿಸಿ ಬೆಳೆಸಬೇಕಿದೆ. ಮಕ್ಕಳಿಗೆ ನಮ್ಮ ಕಲೆ, ಸಂಸ್ಕೃತಿಯನ್ನು ಕಲಿಸಿ ಸೂರ್ಯ-ಚಂದ್ರ ಇರುವವರೆಗೂ ಅದನ್ನು ಕೊಂಡೊಯ್ಯಬೇಕಿದೆ. ಆ ಕಾರ್ಯವನ್ನು ಆಳ್ವಾಸ್ ನುಡಿಸಿರಿ ವಿರಾಸತ್ ಮಾಡುತ್ತಿದೆ ಎಂದರು.
ರಾಜ್ಯಾದ್ಯಂತ 50 ಕಾರ್ಯಕ್ರಮ ಗುರಿ
ದೇಶದ 144 ಕೋಟಿ ಜನಸಂಖ್ಯೆಯಲ್ಲಿ 52 ಕೋಟಿಗು ಅಧಿಕ ಯುವ ಸಮುದಾಯವಿದೆ. ಅವರನ್ನು ಸಾಂಸ್ಕೃತಿಕವಾಗಿ ಬೆಳೆಸಲು ಇದು ಸದವಕಾಶವಾಗಿದೆ. 500ಕ್ಕೂ ಹೆಚ್ಚು ಮಕ್ಕಳನ್ನು ದತ್ತು ಪಡೆದು, ಅವರಿಗೆ ನಮ್ಮ ಕಲೆ, ಸಂಸ್ಕೃತಿಯನ್ನು ಕಲಿಸಿ ಒಳ್ಳೆಯ ಕಲಾವಿದರನ್ನಾಗಿ ಮಾಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ರಾಜ್ಯಾದ್ಯಂತ 50 ಕಾರ್ಯಕ್ರಮ ನೀಡುವ ಗುರಿ ಹೊಂದಲಾಗಿದೆ. ಉಡುಪಿಯ ಈ ಕಾರ್ಯಕ್ರಮವನ್ನು ಕೀರ್ತಿಶೇಷ ಡಾ. ವಿ.ಎಸ್. ಆಚಾರ್ಯ ಅವರಿಗೆ ಅರ್ಪಣೆ ಮಾಡಲಾಗಿದೆ ಎಂದು ಆಳ್ವಾ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಶುಭಹಾರೈಸಿದರು.
ಅಮೆರಿಕದ ರಿಲಿಜಿಯನ್ಸ್ ಫಾರ್ ಪೀಸ್ ಸೆಕ್ರೆಟರಿ ಜನರಲ್ ವಿಲಿಯಂ ಎಫ್. ವೆಂಡ್ಲೆ, ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಪುತ್ತಿಗೆ ಕಿರಿಯ ಯತಿ ಸುಶ್ರೀಂದ್ರ ಶ್ರೀ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭುವನ ಪ್ರಸಾದ ಹೆಗ್ಡೆ ವಂದಿಸಿದರು.
ಗಮನ ಸೆಳೆದ 500 ವಿದ್ಯಾರ್ಥಿ ಕಲಾವಿದರು
ಸಭಾ ಕಾರ್ಯಕ್ರಮದ ಬಳಿಕ ಆಳ್ವಾಸ್ ಸಂಸ್ಥೆಯ 500 ವಿದ್ಯಾರ್ಥಿ ಕಲಾವಿದರು ಸುಮಾರು ಮೂರುವರೆ ಗಂಟೆಗಲ ಕಾಲ ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡವು. ಯೋಗದೀಪಿಕಾ, ಅಷ್ಟಲಕ್ಷ್ಮೀ ಶಾಸ್ತ್ರೀಯ ನೃತ್ಯ, ಶಂಕರಾರ್ಧ ಶರೀರಣಿ ಎಂಬ ಬಡಗುತಿಟ್ಟು ಯಕ್ಷಗಾನ, ಗುಜರಾತಿನ ದಾಂಡಿಯಾ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಸೃಜಾನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ನೃತ್ಯ, ಪುರುಲಿಯಾ ಸಿಂಹ ನೃತ್ಯ, ಹಿರಣ್ಯಾಕ್ಷ ವಧೆ ಎಂಬ ತೆಂಕತಿಟ್ಟು ಯಕ್ಷಗಾನ, ಬೊಂಬೆ ವಿನೋದಾವಳಿ ಕಾರ್ಯಕ್ರಮ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ರಂಜಿಸಿತು.