ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಅಣಕು ಕಾರ್ಯಾಚರಣೆ ನಡೆಯಿತು.
ಉಡುಪಿ: ಸಾರ್ವಜನಿಕ ಸ್ಥಳಗಳಲ್ಲಿ ಸಂಭವಿಸಬಹುದಾದ ತುರ್ತು ಪರಿಸ್ಥಿತಿ ಮತ್ತು ಬಾಂಬ್ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ರೈಲ್ವೆ ಸುರಕ್ಷತಾ ಪಡೆ, ನಗರ ಪೊಲೀಸ್, ಮಣಿಪಾಲ ಪೊಲೀಸ್ ಹಾಗೂ ಬಾಂಬ್ ಪತ್ತೆ ದಳದ ಸಹಯೋಗದಲ್ಲಿ ಗುರುವಾರ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಅಣಕು ಕಾರ್ಯಾಚರಣೆ ನಡೆಯಿತು.
ಅಣಕು ಕಾರ್ಯಾಚರಣೆಯಲ್ಲಿ ರೈಲ್ವೆ ನಿಲ್ದಾಣದ ಅಧಿಕಾರಿಗಳು, ವೈದ್ಯಕಿಯ ತಂಡ, ಶ್ವಾನ ದಳ ಹಾಗೂ ಸ್ಥಳಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮಧ್ಯಾಹ್ನ 2:30ಕ್ಕೆ ನಿಲ್ದಾಣ ಒಂದನೇ ಪ್ಲಾಟ್ಫಾಮ್ರ್ನಲ್ಲಿ ಸಂಶಯಾಸ್ಪದ ವಸ್ತು ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ಆರ್ಪಿಎಫ್ ಇನ್ಸ್ಪೆಕ್ಟರ್ ಮತ್ತು ತಂಡ ಸ್ಥಳವನ್ನು ಸುತ್ತುವರೆದು, ಮೆಗಾಫೋನ್ ಮೂಲಕ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಶ್ವಾನ ದಳದ ನೆರವಿನೊಂದಿಗೆ ಮೊದಲ ಹಂತದ ತಪಾಸಣೆ ನಡೆಸಲಾಯಿತು. ನಂತರ ಬಾಂಬ್ ಪತ್ತೆ ದಳದವರು ಅತ್ಯಾಧುನಿಕ ರೋಬೋಟಿಕ್ ಸಾಧನ ಹಾಗೂ ಬಾಂಬ್ ಡಿಟೆಕ್ಷನ್ ಕಿಟ್ ಬಳಸಿ ವಸ್ತುವನ್ನು ಪರೀಕ್ಷಿಸಿದರು. ಅಂತಿಮವಾಗಿ ಯಾವುದೇ ಅಪಾಯಕಾರಿ ಸ್ಫೋಟಕಗಳಿಲ್ಲ ಎಂದು ಖಚಿತಪಡಿಸಿಕೊಂಡು ಮಧ್ಯಾಹ್ನ 3:25ಕ್ಕೆ ಕಾರ್ಯಾಚರಣೆ ಮುಕ್ತಾಯಗೊಳಿಸಲಾಯಿತು.
ಕಾರ್ಯಾಚರಣೆಯಲ್ಲಿ ಆರ್ಪಿಎಫ್ ಸಿಬ್ಬಂದಿ ಗಲಭೆ ನಿಯಂತ್ರಣ ಕವಚ, ಹೆಲ್ಮೆಟ್, ಶೀಲ್ಡ್ ಹಾಗೂ ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ಗಳನ್ನು ಬಳಸಿದರು. ತುರ್ತು ಸಂದರ್ಭದಲ್ಲಿ ಇಲಾಖೆಗಳ ನಡುವಿನ ಸಮನ್ವಯ ಮತ್ತು ಕ್ಷಿಪ್ರ ಪ್ರತಿಕ್ರಿಯೆಯನ್ನು ಪರೀಕ್ಷಿಸುವುದು ತಾಲೀಮಿನ ಮುಖ್ಯ ಉದ್ದೇಶವಾಗಿತ್ತು.