ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ನ್ಯಾ. ಎಂ.ಜಿ. ಉಮಾ ಉದ್ಘಾಟಿಸಿದರು. ಜಯಂತಿ ಶಿವಾಜಿ ಶೆಟ್ಟಿ, ಪ್ರೊ. ಸುರೇಖಾ ಕೆ., ಪ್ರೊ.ರೋಹಿತ್ ಎಸ್. ಅಮೀನ್, ಶ್ರೀಧರ್ ಪಿ.ಎಸ್., ಡಾ.ಶ್ರೀನಿವಾಸ ಪ್ರಸಾದ್, ಸಾಯಿ ರಮ್ಯಾ, ಅಪರ್ಣ ಲಕ್ಷ್ಮೀ ಇತರರಿದ್ದರು.
* ಹೈಕೋರ್ಟ್ ನಿವೃತ್ತ ನ್ಯಾಯಾಧೀಶೆ ಎಂ.ಜಿ. ಉಮಾ ಅನಿಸಿಕೆ
* ಉಡುಪಿಯ ಲಾ ಕಾಲೇಜ್ನಲ್ಲಿ ಅಣಕು ನಾಯಾಲಯ ಸ್ಪರ್ಧೆ
ಉಡುಪಿ: ವಕೀಲ ವೃತ್ತಿ ಸವಾಲಿನಿಂದ ಕೂಡಿರುತ್ತದೆ. ಈ ವೃತ್ತಿಯಲ್ಲಿ ಯಶಸ್ವಿಯಾಗಬೇಕಾದರೆ ಸಾಕ್ಷಿದಾರರು ಮತ್ತು ಕಕ್ಷಿಗಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕಾಗುತ್ತದೆ. ದಾವೆಗೆ ಸಂಬಂಧಿಸಿ ವಾದ ಪತ್ರಗಳ ರಚನೆ, ಹಾಗೂ ಮೌಖಿಕ ವಾಕ್ಚಾತುರ್ಯ ಬೇಕಾಗುತ್ತದೆ. ಪ್ರಮುಖವಾಗಿ ವಕೀಲ ವೃತ್ತಿಯಲ್ಲಿ ಸಹಾನುಭೂತಿ ಮತ್ತು ಮಾನವೀಯತೆ ಬಹಳ ಮುಖ್ಯ ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶೆ ಎಂ.ಜಿ. ಉಮಾ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಅಡ್ವೊಕೇಟ್ ಪಿ.ಶಿವಾಜಿ ಶೆಟ್ಟಿ ಸ್ಮರಣಾರ್ಥ ಶುಕ್ರವಾರ (ಏ.10) ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯಿಂದ ವಕೀಲ ವೃತ್ತಿಗೆ ಅವಶ್ಯಕವಾದ ಕೌಶಲ ಕಲಿಯಲು ಪ್ರಾಯೋಗಿಕ ಮಾರ್ಗದರ್ಶನವಾಗಲಿದೆ ಎಂದರು.
ಬೆಂಗಳೂರಿನ ಆಲೆಯನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. (ಡಾ.) ಪ್ರಕಾಶ್ ಕಣಿವೆ ಮಾತನಾಡಿ, ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಆಯೋಜನೆಯ ಪ್ರಾರಂಭದ ದಿನಗಳ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸುರೇಖಾ ಕೆ. ಅಧ್ಯಕ್ಷತೆ ವಹಿಸಿದ್ದರು. ದಿ. ಪಿ.ಶಿವಾಜಿ ಶೆಟ್ಟಿ ಅವರ ಪತ್ನಿ ಜಯಂತಿ ಶೆಟ್ಟಿ, ಮಾನವಿಕ ವಿಭಾಗದ ಮುಖ್ಯಸ್ಥ ಪ್ರೊ.ರೋಹಿತ್ ಎಸ್. ಅಮೀನ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ್ ಪಿ.ಎಸ್., ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ ಪ್ರಸಾದ್, ಅಣಕು ನ್ಯಾಯಾಲಯ ಕಮಿಟಿಯ ಕಾರ್ಯದರ್ಶಿ ಸಾಯಿ ರಮ್ಯಾ, ಅಪರ್ಣ ಲಕ್ಷ್ಮೀ ಉಪಸ್ಥಿತರಿದ್ದರು.
ಶ್ರೀನಿಧಿ ಪ್ರಾರ್ಥಿಸಿದರು. ರಿಶಾಲಿ ವಂದಿಸಿದರು. ಸಿಮ್ರಾನ್ ಕಾರ್ಯಕ್ರಮ ನಿರೂಪಿಸಿದರು.