ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ, ಉಡುಪಿ
* ಸುಗುಣೇಂದ್ರ ತೀರ್ಥ ಶ್ರೀಪಾದರ ಮಾಹಿತಿ
* ಪುತ್ತಿಗೆ ಮೂಲ ಮಠದಲ್ಲಿ 5 ದಿನ ಕ್ಯಾಂಪ್
ಉಡುಪಿ: ಚಿಕ್ಕ ಮಕ್ಕಳು ಹಾಗೂ ಶಾಲಾ-ಕಾಲೇಜ್ಗಳ ಅನೇಕ ವಿದ್ಯಾರ್ಥಿಗಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿದೆ. ಮೊಬೈಲ್ ದುಶ್ಚಟದಿಂದ ಅವರಲ್ಲಿ ಬುದ್ಧಿಯಲ್ಲಿ ದುಷ್ಪರಿಣಾಮ ಹಾಗೂ ವಿವಿಧೆಡೆ ದುರಂತ ಆಗುತ್ತಿರುವುದನ್ನು ನಿತ್ಯ ಕೇಳುತ್ತಿದ್ದೇವೆ. ಹೀಗಾಗಿ ಮದ್ಯವರ್ಜನ ಶಿಬಿರದಂತೆಯೇ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳು ತಪ್ಪಿಸಲು ಪುತ್ತಿಗೆ ಮೂಲ ಮಠದಲ್ಲಿ ಮೇ 14ರಿಂದ 18ರ ವರೆಗೆ 'ಮೊಬೈಲ್ ವರ್ಜನ ಶಿಬಿರ' ಆಯೋಜಿಸಲಾಗಿದೆ ಎಂದು ಪುತ್ತಿಗೆ ಮಠದ ಯತಿಕುಲ ಚಕ್ರವರ್ತಿ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.
ಉಡುಪಿಯ ಗೀತಾಮಂದಿರದಲ್ಲಿ ಶನಿವಾರ (ಏ.18) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊಬೈಲ್ನಿಂದ ಎಷ್ಟು ಒಳ್ಳೆಯದಾಗುತ್ತಿದೆಯೋ ಅಷ್ಟೇ ಕೆಟ್ಟದ್ದೂ ಆಗುತ್ತಿದೆ. ಯಾವುದೇ ಸಕಾರಾತ್ಮಕ ಚಟುವಟಿಕೆ, ಆಟೋಟಗಳಲ್ಲಿ ಮಕ್ಕಳು ಪಾಲ್ಗೊಳ್ಳದೆ ಮನೆಯಲ್ಲಿ ನಿತ್ಯವೂ ಮೊಬೈಲ್ ಹಿಡಿದು ಮೂಲೆ ಸೇರುತ್ತಿದ್ದಾರೆ. ಅದರಿಂದ ಅವರ ಬೌದ್ಧಿಕ ಮಟ್ಟವೂ ಸಹ ಕುಸಿಯುತ್ತಿದೆ. ಅಪರಾಧ ಕೃತ್ಯಗಳ ಮನಸ್ಥಿತಿ ಯುವ ಸಮುದಾಯದಲ್ಲಿ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೊಬೈಲ್ ವ್ಯಸನಿಗಳು
ಮನೆಯವರು ಎಷ್ಟೇ ಹೇಳಿದರೂ ಕುಡಿತದ ಚಟ ಬಿಡದ ಮದ್ಯ ವ್ಯಸನಿಗಳಂತೆ ಅನೇಕ ಕುಟುಂಬಗಳ ಮಕ್ಕಳು ಮೊಬೈಲ್ ವ್ಯಸನಿಗಳಾಗಿದ್ದಾರೆ. ಕುಡಿಯಲು ಹಣ ನೀಡದ ತಂದೆ-ತಾಯಿ, ಹೆಂಡತಿಯನ್ನು ಹೊಡೆಯುವ ರೀತಿಯಲ್ಲಿ ಮೊಬೈಲ್ ಕೊಡದ ಪಾಲಕರನ್ನೂ ಮಕ್ಕಳೇ ಥಳಿಸುತ್ತಿರುವ ಟನೆ ನಡೆಯುತ್ತಿದೆ. ಒಂದೆರಡು ಕಡೆಗಳಲ್ಲಿ ಹೆತ್ತವರನ್ನೇ ಕೊಲೆ ಮಾಡಿದ ಘಟನೆಯೂ ಮಾಧ್ಯಮಗಳಲ್ಲಿ ಬಂದಿದೆ. ಹೀಗಾಗಿ ಬೇಸಿಗೆ ರಜಾ ದಿನಗಳಲ್ಲಿ ಅವರನ್ನು ಮೊಬೈಲ್ ಮುಕ್ತರನ್ನಾಗಿಸಲು ಹಾಗೂ ಮೊಬೈಲ್ ವ್ಯಸನದಿಂದ ಅವರು ಹೊರಬರುವಂತಾಗಲು ಈ ಶಿಬಿರ ಸಹಕಾರಿಯಾಗಲಿದೆ ಎಂದರು.
ಮೊಬೈಲ್ ಚಟ, ದುರ್ವ್ಯಸನಕ್ಕೆ ಒಳಗಾದ ಮಕ್ಕಳನ್ನು ಈ ಶಿಬಿರಕ್ಕೆ ಸೇರಿಸಲು ಆಸಕ್ತಿ ಇರುವ ಚಿಂತಾಕ್ರಾಂತ ಪಾಲಕರು ಮೇ 10ರೊಳಗೆ ಗೀತಾ ಮಂದಿರದಲ್ಲಿ ಕೆ. ರಮಣ ಆಚಾರ್ಯ ಹಾಗೂ ಉಮಾಪ್ರಸಾದ್ ಅವರಿಗೆ ಅರ್ಜಿ ಸಲ್ಲಿಸಬೇಕು. ಮನೋವೈದ್ಯರು, ಕಲಾವಿದರು ಮಕ್ಕಳಿಗೆ ಮನಸ್ಸು ನಿಗ್ರಹಿಸುವ ಚಟುವಟಿಕೆ ನಡೆಸಲಿದ್ದಾರೆ. ಇದೊಂದು ಪ್ರಾಯೋಗಿಕ ಶಿಬಿರವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ವಿಸ್ತರಿಸುವ ಚಿಂತನೆಯೂ ಇದೆ ಎಂದು ಶ್ರೀಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತಿಗೆ ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಇದ್ದರು.
ಶ್ರೀಪುತ್ತಿಗೆ ಸುಗುಣ ಶಿಬಿರ ಉದ್ಘಾಟನೆ ಏ.19ರಂದು
ಸುಗುಣೇಂದ್ರ ಶ್ರೀ ಹಾಗೂ ಪಟ್ಟದ ಶಿಷ್ಯ ಸುಶ್ರೀಂದ್ರ ಶ್ರೀ ಉಪಸ್ಥಿತಿಯಲ್ಲಿ ಉಡುಪಿಯ ಗೀತಾಮಂದಿರದಲ್ಲಿ ಏ.20ರಿಂದ ಏ.30ರ ವರೆಗೆ ಪ್ರತಿದಿನ ಮಧ್ಯಾಹ್ನ 2ರಿಂದ ಸಂಜೆ 5:30ರ ವರೆಗೆ ಪ್ರಥಮ ಬಾರಿಗೆ 'ಶ್ರೀಪುತ್ತಿಗೆ ಸುಗುಣ ಶಿಬಿರ' ಆಯೋಜಿಸಲಾಗಿದೆ. ಸನಾತನ ಹಿಂದೂ ಸಂಸ್ಕೃತಿ ಸಂರಕ್ಷಣಾರ್ಥ ಶಿಬಿರ ಆಯೋಜಿಸಿದ್ದು, ಏ.19ರಂದು ಮಧ್ಯಾಹ್ನ 3 ಗಂಟೆಗೆ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಯಶಪಾಲ್ ಸುವರ್ಣ, ಖ್ಯಾತ ಚಿತ್ರನಟ, ನಿರ್ದೇಶಕ ರಿಷಭ್ ಶೆಟ್ಟಿ, ಕಾಪು ಹೊಸ ಮಾರಿಗುಡಿಯ ವಾಸುದೇವ ಶೆಟ್ಟಿ, ಮಂಗಳೂರು ಶ್ರೀನಿವಾಸ ಯುನಿವರ್ಸಿಟಿಯ ಕುಲಾಧಿಪತಿ ಡಾ.ಶ್ರೀನಿವಾಸ ರಾವ್ ಪಾಲ್ಗೊಳ್ಳಲಿದ್ದಾರೆ. ಏ.30ರಂದು ಹಿರಿಯಡ್ಕದಲ್ಲಿರುವ ಪುತ್ತಿಗೆ ಮೂಲಮಠದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.