ಉಡುಪಿಯಲ್ಲಿ ಆಯೋಜಿಸಿದ್ದ ಎಸ್ಐಆರ್ ಮಹಾ ಅಭಿಯಾನದ ನಿಮಿತ್ತ ಮನೆಮನೆ ಭೇಟಿ ಕಾರ್ಯಕ್ರಮದಲ್ಲಿ ಕಿಶೋರಕುಮಾರ್ ಪುತ್ತೂರು ಮಾತನಾಡಿದರು. ಯಶ್ಪಾಲ್ ಸುವರ್ಣ, ದಿನೇಶ್ ಅಮೀನ್, ರಾಜೀವ್ ಕುಲಾಲ, ಜಗದೀಶ್ ಆಚಾರ್ಯ, ನಳಿನಿ ಪ್ರದೀಪ್, ಉಮೇಶ್ ನಾಯ್ಕ ಇತರರಿದ್ದರು.
* ಎಂಎಲ್ಸಿ ಕಿಶೋರಕುಮಾರ್ ಪುತ್ತೂರು ಮನವಿ
* ಉಡುಪಿಯಲ್ಲಿ ಎಸ್ಐಆರ್ ಅಭಿಯಾನದಲ್ಲಿ ಭಾಗಿ
ಉಡುಪಿ: ದೇಶವಾಸಿಗಳಲ್ಲದವರು, ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ತೆರವು ಮಾಡಲು ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯ ನಡೆಸುತ್ತಿದೆ. ಹೀಗಾಗಿ ನಾವೆಲ್ಲರೂ ಸಹ ರಾಷ್ಟ್ರದ ಭದ್ರತೆ ಹಾಗೂ ಹಿತಾಸಕ್ತಿಗಾಗಿ ಯಾವುದೇ ಅರ್ಹ ಮತದಾರರು ತಪ್ಪಿಹೋಗದಂತೆ ಶ್ರಮಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸೋಣ. ಆ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಜನರು ಭರ್ತಿ ಮಾಡಿದ ಎನ್ಯುಮರೇಷನ್ ಫಾಮ್ರ್ಅನ್ನು ಬಿಎಲ್ಒಗಳಿಗೆ ತಲುಪಿಸೋಣ ಎಂದು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಕ್ಷೇತ್ರದ ವಿ.ಪ. ಸದಸ್ಯ ಕಿಶೋರಕುಮಾರ್ ಪುತ್ತೂರು ಮನವಿ ಮಾಡಿದರು.
ಉಡುಪಿಯಲ್ಲಿ ಬಿಜೆಪಿಯ ಸಂಘಟನಾತ್ಮಕ ಚಟುವಟಿಕೆ ನಿಮಿತ್ತ ಉಡುಪಿ ವಿಧಾನಸಭಾ ಕ್ಷೇತ್ರಾದ್ಯಂತ ಸೋಮವಾರ (ಜು.27) ಹಮ್ಮಿಕೊಂಡಿದ್ದ ಎಸ್ಐಆರ್ ಮಹಾ ಅಭಿಯಾನದ ನಿಮಿತ್ತ ವಿವಿಧ ಮಂಡಲ, ಶಕ್ತಿ ಕೇಂದ್ರ ಹಾಗೂ ಬೂತ್ಗಳಲ್ಲಿ ಬಿರುಸಿನ ಪ್ರವಾಸ, ಸಭೆ ಹಾಗೂ ಮನೆ-ಮನೆ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ಉಡುಪಿಯ ಪ್ರಮುಖ ಬೂತ್ಗಳಾದ ಹುಡ್ಕೋ ಕಾಲನಿ ಮಣಿಪಾಲ, ಕರಂಬಳ್ಳಿ, ಕಲ್ಯಾಣಪುರ, ಮಹಾವಿಷ್ಣುಮೂರ್ತಿ ನಗರ, ಕೇಳರ್ಕಳಬೆಟ್ಟು, ಕನ್ನರಪಾಡಿ ಕಡೆಕಾರ್, ಅಂಬಲಪಾಡಿ ಗ್ರಾಪಂ ವ್ಯಾಪ್ತಿ, ಶಾರದಾ ಕಲ್ಯಾಣ ಮಂಟಪ ಕಂಜಿಬೆಟ್ಟು ವಾರ್ಡ್, ಹಾವಂಜೆ ಹಾಗೂ ಉಪ್ಪೂರು ಶಕ್ತಿ ಕೇಂದ್ರಗಳಲ್ಲಿ ಸಭೆ ನಡೆಸಲಾಯಿತು. ಬೂತ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಮುಖರೊಂದಿಗೆ ಸೇರಿ ಅಭಿಯಾನದ ಯಶಸ್ಸಿಗೆ ಸಮಾಲೋಚನೆ ನಡೆಸಲಾಯಿತು.
ಉಡುಪಿ ನಗರ ಮಂಡಲ ಅಧ್ಯಕ್ಷ ದಿನೇಶ್ ಅಮೀನ್, ಜಿಲ್ಲಾ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜೀವ್ ಕುಲಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ, ಜಿಲ್ಲಾ ಉಪಾಧ್ಯೆ ನಳಿನಿ ಪ್ರದೀಪ್, ಜಿಲ್ಲಾ ಕಾರ್ಯದರ್ಶಿ ಉಮೇಶ್ ನಾಯ್ಕ ಉಪಸ್ಥಿತರಿದ್ದರು.
ಪಕ್ಷದ ಪ್ರಮುಖರಾದ ರಾಜೇಶ್ ಶೆಟ್ಟಿ, ಮೋಹನ್ ಶೆಟ್ಟಿ, ಎಸ್. ನಾರಾಯಣ, ಉದಯಕುಮಾರ ಶೆಟ್ಟಿ, ಮನೋಜ್ ಶೆಟ್ಟಿ, ಗಿರೀಶ್ ಅಂಚನ್, ಬೂತ್ ಅಧ್ಯಕ್ಷರಾದ ಪ್ರಭಾಕರ್ ಕುಂದರ್, ಜಗದೀಶ್, ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಶಾಸಕ ಯಶ್ಪಾಲ್ ಸಾಥ್
ವಾರಂಬಳ್ಳಿ ಶಕ್ತಿ ಕೇಂದ್ರ ಹಾಗೂ ಉಪ್ಪೂರು ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಕಿಶೋರಕುಮಾರ್ ಅವರು ಮನೆ-ಮನೆ ಭೇಟಿ ಅಭಿಯಾನ ನಡೆಸಿದರು. ಶಾಸಕ ಯಶಪಾಲ್ ಸುವರ್ಣ ಸಾಥ್ ನೀಡಿ, ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 12 ವರ್ಷಗಳ 'ವಿಶ್ವಾಸ, ವಿಕಾಸ ಮತ್ತು ಜನ ಕಲ್ಯಾಣ'ದ ಸುಶಾಸನದ ನಿಮಿತ್ತ ಪಕ್ಷಕ್ಕಾಗಿ ದುಡಿದ ವಿ.ಪ. ಮಾಜಿ ಸದಸ್ಯ ದಿ.ಸಂಜೀವ್ ಶೆಟ್ಟಿ ನಿವಾಸ ಹಾಗೂ ಪಕ್ಷದ ಹಿರಿಯರಾದ ಗುಲಾಬಿ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಮರ್ಪಿಸಿದರು.