ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರವು ಜಿಲ್ಲಾ ಕೇಂದ್ರವಾಗಿದ್ದು ಶಿಕ್ಷಣ, ವೈದ್ಯಕೀಯ, ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನಗರೀಕರಣ, ಹೊಸ ಬಡಾವಣೆಗಳ ನಿರ್ಮಾಣ ಹಾಗೂ ವಾಣಿಜ್ಯ ಚಟುವಟಿಕೆಗಳ ವಿಸ್ತರಣೆಯಿಂದ ವಿದ್ಯುತ್ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಹೀಗಾಗಿ ಈ ಭಾಗದ ಮೆಸ್ಕಾಂಗೆ ಮೂಲಸೌಕರ್ಯ ಹಾಗೂ ಸಮಗ್ರ ವರ್ಧನೆಗೆ 15 ಕೋಟಿ ರೂ. ವಿಶೇಷ ಅನುದಾನ ನೀಡಿ ಎಂದು ಶಾಸಕ ಯಶ್ಪಾಲ್ ಸುವರ್ಣ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಉಡುಪಿಯ ಹಲವು ಪ್ರದೇಶಗಳಲ್ಲಿ ಕಡಿಮೆ ವೋಲ್ಟೇಜ್, ವಿದ್ಯುತ್ ವ್ಯತ್ಯಯ ಹಾಗೂ ಟ್ರಾನ್ಸ್ಫಾರ್ಮರ್ಗಳ ಮೇಲಿನ ಹೆಚ್ಚಿನ ಒತ್ತಡದಿಂದ ಪದೇಪದೆ ವಿದ್ಯುತ್ ವ್ಯತ್ಯಯ ಆಗತೊಡಗಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಗತ್ಯವಿರುವ ಕಡೆ ಹೊಸ ಟ್ರಾನ್ಸ್ಫಾರ್ಮರ್ ಅಳವಡಿಕೆ, ಹಾಲಿ ಟ್ರಾನ್ಸ್ಫಾರ್ಮರ್ಗಳ ಸಾಮರ್ಥ್ಯ ಹೆಚ್ಚಿಸುವುದು, ಹಳೆಯ ವಿದ್ಯುತ್ ಮಾರ್ಗಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ಹೊಸ ಕೇಬಲ್ ಮತ್ತು ವಿತರಣಾ ಮಾರ್ಗ ನಿರ್ಮಿಸುವ ಅಗತ್ಯತೆಯಿದೆ. ವಿದ್ಯುತ್ ಬೇಡಿಕೆ ಹೆಚ್ಚಿರುವ ಪ್ರದೇಶಗಳಲ್ಲಿ ಹೊಸ ಸಬ್ಸ್ಟೇಷನ್ ನಿರ್ಮಿಸಿ, ಹಾಲಿ ಸಬ್ಸ್ಟೇಷನ್ಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಡಿಮೆ ವೋಲ್ಟೇಜ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಪ್ರಮುಖ ರಸ್ತೆ ಹಾಗೂ ಜಂಕ್ಷನ್ಗಳಲ್ಲಿ ರಸ್ತೆ ದೀಪ ಮತ್ತು ಹೈಮಾಸ್ಟ್ ದೀಪಗಳ ವ್ಯವಸ್ಥೆ ಹೆಚ್ಚಿಸಬೇಕು. ತನ್ಮೂಲಕ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕಿದೆ. ಪ್ರಸ್ತುತ ಹಾಗೂ ಮುಂದಿನ ಹಲವು ವರ್ಷಗಳ ವಿದ್ಯುತ್ ಬೇಡಿಕೆ ಗಮನದಲ್ಲಿಟ್ಟುಕೊಂಡು ಮೆಸ್ಕಾಂಗೆ ಕೂಡಲೇ 15 ಕೋಟಿ ರೂ. ವಿಶೇಷ ಅನುದಾನ ತುರ್ತಾಗಿ ಮಂಜೂರು ಮಾಡಬೇಕು ಎಂದು ಸಚಿವರಿಗೆ ಯಶ್ಪಾಲ್ ಸುವರ್ಣ ಮನವಿ ಮಾಡಿದ್ದಾರೆ.