ಉಡುಪಿಯ ಆರ್ಟಿಒ ಕಚೇರಿಗೆ ಭೇಟಿ ನೀಡಿದ ಯಶ್ಪಾಲ್ ಸುವರ್ಣ ಸಿಬ್ಬಂದಿಯಿಂದ ಮಾಹಿತಿ ಪಡೆದರು.
* ಶಾಸಕ ಯಶ್ಪಾಲ್ ಸುವರ್ಣ ಸರ್ಕಾರಕ್ಕೆ ಆಗ್ರಹ
* ಸಿಬ್ಬಂದಿ ಕೊರತೆಯಿಂದ ಸೇವೆಗೆ ತೊಡಕು
ಉಡುಪಿ: ರಾಜ್ಯ ಸರ್ಕಾರಕ್ಕೆ ವಾರ್ಷಿಕ 312 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಿರುವ ಉಡುಪಿ ಜಿಲ್ಲಾ ಆರ್ಟಿಒ ಕಚೇರಿಯಲ್ಲಿ ಮುಖ್ಯ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆಯಿದ್ದು, ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ಸಾರಿಗೆ ಸಚಿವರು ಕೂಡಲೇ ಅಗತ್ಯ ಹುದ್ದೆ ಭರ್ತಿ ಮಾಡಬೇಕಿದೆ. ಈ ಕುರಿತು ಶೀಘ್ರದಲ್ಲೇ ಮನವಿ ಮಾಡುವುದಾಗಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ಉಡುಪಿಯ ಸಾರಿಗೆ ವಿಭಾಗಾಧಿಕಾರಿಯ ಕಚೇರಿಯಲ್ಲಿ ಪ್ರಮುಖ ಹುದ್ದೆ ಖಾಲಿ ಇದ್ದು ವಾಹನಗಳಿಗೆ ಸಂಬಂಧಿಸಿ ವಿವಿಧ ಕೆಲಸಗಳು ವಿಳಂಬವಾಗುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಸೋಮವಾರ (ಜು.27) ಆರ್ಟಿಒ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಕಚೇರಿಯಲ್ಲಿ 6 ಹುದ್ದೆ ಖಾಲಿ
ಕಚೇರಿಯ ಪ್ರಮುಖ ಹುದ್ದೆಗಳಾದ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ಟಿಒ) ಹಾಗೂ ಸಹಾಯಕ ಸಾರಿಗೆ ಅಧಿಕಾರಿ ಹುದ್ದೆಯೇ ಖಾಲಿ ಇದೆ. ಮೋಟಾರು ವಾಹನ ಹಿರಿಯ ನಿರೀಕ್ಷಕರೇ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಸುತ್ತಿದ್ದಾರೆ. ಮೋಟಾರು ವಾಹನ ನಿರೀಕ್ಷಕ ರ 5 ಹುದ್ದೆಯಲ್ಲಿ 4 ಖಾಲಿ ಇದೆ.
ಕೇವಲ ಇಬ್ಬರು ಮೋಟಾರು ವಾಹನ ನಿರೀಕ್ಷಕರು ವಾರದಲ್ಲಿ 3 ದಿನ ವಿವಿಧ ತಾಲೂಕುಗಳಲ್ಲಿ ಕ್ಯಾಂಪ್ ಹಾಗೂ ಜಿಲ್ಲಾ ಕಚೇರಿಯಲ್ಲಿ ವಾಹನಗಳ ಪರಿಶೀಲನೆ ನಡೆಸುವ ದುಸ್ಥಿತಿ ಇದೆ. ಅಲ್ಲದೆ, ಉಡುಪಿ ಜಿಲ್ಲೆಯ 22 ಪೊಲೀಸ್ ಠಾಣೆಗಳಿಗೆ ಸಂಬಂಧಿತ ಅಪರಾಧ ಪ್ರಕರಣಗಳ ವಾಹನ ತಪಾಸಣೆಯನ್ನೂ ಇದೇ ಅಧಿಕಾರಿಗಳು ನಿರ್ವಹಿಸುವಂತಾಗಿದೆ.
ಬ್ರಹ್ಮಾವರದಲ್ಲಿ ಕ್ಯಾಂಪ್ ಇಲ್ಲ
ಬ್ರಹ್ಮಾವರ ತಾಲೂಕಾಗಿ ಹಲವು ವರ್ಷ ಕಳೆದಿದೆ. ಅಲ್ಲಿನ ಆಟೋ, ಟ್ಯಾಕ್ಸಿ ಚಾಲಕರು ಆರ್ಟಿಒ ಕ್ಯಾಂಪ್ ಆಯೋಜಿಸಿವಂತೆ ಬೇಡಿಕೆ ಇಟ್ಟಿದ್ದರೂ ಇಲ್ಲಿ ಸಿಬ್ಬಂದಿ ಕೊರತೆಯಿಂದ ಕ್ಯಾಂಪ್ ಆರಂಭವಾಗಿಲ್ಲ. ವಾಹನ ಬಾಡಿಗೆ ಮಾಡಿ ದುಡಿದು ತಿನ್ನುವ ಕಾರ್ಮಿಕ ವರ್ಗಕ್ಕೆ ಆರ್ಟಿಒ ಕಚೇರಿ ಕೆಲಸಕ್ಕಾಗಿ ಅಲೆದಾಡುವಂತಾಗಿದೆ. ಪ್ರಮುಖ ಇಲಾಖೆ ಸರ್ಕಾರದ ರ್ನಿಲಕ್ಷ$್ಯಕ್ಕೆ ಒಳಗಾಗಿರುವುದು ನಿಜಕ್ಕೂ ಬೇಸರ ತಂದಿದೆ ಎಂದು ಯಶ್ಪಾಲ್ ತಿಳಿಸಿದರು.
ಆಗಮಿಸುವ ಸಾರ್ವಜನಿಕರಿಗೆ ತ್ವರಿತ ಸೇವೆ ನೀಡಲು ಯತ್ನಿಸಿ. ಕಚೇರಿ ಪ್ರಾಂಗಣದಲ್ಲಿ ಬೆಳೆದ ಗಿಡಗಂಟಿ ತಕ್ಷಣ ತೆರವು ಮಾಡಿಸಿ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿ ಎಂದು ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸೂಚಿಸಿದರು.
ಉಡುಪಿಯ ಆರ್ಟಿಒ ಕಚೇರಿಯಲ್ಲಿ ಸೂಕ್ತ ಸಿಬ್ಬಂದಿಯೇ ಇಲ್ಲ. ಅದರಿಂದಾಗಿ ಡ್ರೈವಿಂಗ್ ಲೈಸೆನ್ಸ್, ವಾಣಿಜ್ಯ ವಾಹನ, ಆಟೋ, ಬಸ್, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಸಹಿತ ವಿವಿಧ ಸಾರಿಗೆ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲೂ ಸಹ ಮಾಲೀಕರು ಹರಸಾಹಸ ಪಡುವಂತಾಗಿದೆ. ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಈ ಕಚೇರಿ ನಿದರ್ಶನವಾಗಿದೆ.
— ಯಶ್ಪಾಲ್ ಸುವರ್ಣ. ಉಡುಪಿ ಶಾಸಕ.