ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ರಾಜ್ಯ ಬಜೆಟ್ ಅಧಿವೇಶನದಲ್ಲಿ ಶಾಶಕ ಯಶ್ಪಾಲ್ ಸುವರ್ಣ ಮಾತನಾಡಿದರು.
* ಸರ್ಕಾರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ
* 32 ಸಾವಿರದಿಂದ 1.20 ಲಕ್ಷ ರೂ.ಗೆ ಏರಿಕೆಗೆ ಒತ್ತಾಯ
ಉಡುಪಿ: ಸಾಮಾಜಿಕ ಭದ್ರತಾ ಯೋಜನೆಯಾದ ಮಾಸಾಶನ (ಪಿಂಚಣಿ) ಸೌಲಭ್ಯ ಪಡೆಯಲು ಕುಟುಂಬದ ವಾರ್ಷಿಕ ಆದಾಯ ಮಿತಿ 32 ಸಾವಿರ ರೂ. ಇರುವುದರಿಂದ ಅನೇಕ ಅರ್ಹ ಬಡ ಕುಟುಂಬಗಳು ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಮಾಸಾಶನದ ಆದಾಯ ಮಿತಿಯನ್ನು 1,20 ಲಕ್ಷ ರೂ.ಗೆ ಏರಿಕೆ ಮಾಡಬೇಕು ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸರ್ಕಾರಕ್ಕೆ ಆಗ್ರಹಿಸಿಒದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ (ಮಾ.24) ನಡೆದ ರಾಜ್ಯ ಬಜೆಟ್ ಅಧಿವೇಶನದಲ್ಲಿ ಮಾತನಾಡಿ, ಪಿಂಚಣಿ ಯೋಜನೆಗಳಿಗೆ ಸಂಬಂಧಿಸಿ ಆಗುತ್ತಿರುವ ಸಮಸ್ಯೆಯನ್ನು ಸದನದ ಗಮನಕ್ಕೆ ತಂದರು.
ಪ್ರಸ್ತುತ ಮಾಸಾಶನ ಪಡೆಯುತ್ತಿರುವ ಉಡುಪಿ ಜಿಲ್ಲೆಯ 50 ಸಾವಿರಕ್ಕೂ ಅಧಿಕ ಜನರು ಮತ್ತು ರಾಜ್ಯದ 24 ಲಕ್ಷಕ್ಕೂ ಹೆಚ್ಚು ಜನರು ಮಾಸಾಶನದಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ. ಹೀಗಾಗಿ ಕೂಡಲೇ ಸದರಿ ಮಾಸಾಶನದ ಮಿತಿ ಹೆಚ್ಚಿಸುವ ಅಗತ್ಯತೆಯಿದೆ ಎಂದರು.
ಸರ್ಕಾರ ನಿಗದಿಪಡಿಸಿರುವ ದಿನದ ಕನಿಷ್ಠ ವೇತನವೇ 370 ರೂಪಾಯಿ ಇದೆ. ಹೀಗಾಗಿ ತೀರ ಅವೈಜ್ಞಾನಿಕವಾಗಿರುವ ಈ ಹಿಂದಿನ 32 ಸಾವಿರ ಆದಾಯ ಮಿತಿಯನ್ನು ಏರಿಕೆ ಮಾಡಲೇಬೇಕಿದೆ. ಇಲ್ಲದಿದ್ದಲ್ಲಿ ಬಡ ವಿಧವೆಯರು, ಹಿರಿಯ ನಾಗರಿಕರು ಸರ್ಕಾರದ ಸಾಮಾಜಿಕ ಬದ್ಧತೆಯ ಯೋಜನೆಗಳಿಂದ ವಂಚಿತರಾಗುತ್ತಾರೆ. ರಾಜ್ಯ ಸರ್ಕಾರ ಈ ಗಂಭೀರ ಸಮಸ್ಯೆ ಅರಿತು, ಆದಾಯ ಮಿತಿ ಹೆಚ್ಚಳ ಮಾಡುವವರೆಗೆ ಪ್ರಸ್ತುತ ಪಿಂಚಣಿ ಪರಿಶೀಲನೆ ಮತ್ತು ರದ್ದತಿ ಪ್ರಕ್ರಿಯೆ ತಡೆಹಿಡಿಯಬೇಕು ಎಂದು ಯಶ್ಪಾಲ್ ಆಗ್ರಹಿಸಿದ್ದಾರೆ.