ಉಡುಪಿಯ ಬಜೆ ಅಣೆಕಟ್ಟೆಗೆ ಅಧಿಕಾರಿಗಳೊಂದಿಗೆ ತೆರಳಿದ ಯಶ್​ಪಾಲ್​ ಸುವರ್ಣ ನೀರಿನ ಸಂಗ್ರಹಮಟ್ಟ ಪರಿಶೀಲಿಸಿದರು. ಪ್ರಭಾಕರ್​ ಪೂಜಾರಿ, ಗಿರೀಶ್​ ಅಂಚನ್​, ದುರ್ಗಾ ಪ್ರಸಾದ್​, ಚೇತನ್​, ಅರ್ಕೇಶ್​ ಗೌಡ ಇತರರಿದ್ದರು. 
ಉಡುಪಿ

ನೀರು ಪೂರೈಕೆಯಲ್ಲಿ ಆಗದಿರಲಿ ಸಮಸ್ಯೆ

* ಅಧಿಕಾರಿಗಳಿಗೆ ಉಡುಪಿ ಶಾಸಕ ಯಶ್​ಪಾಲ್​ ಸೂಚನೆ

* ಬಜೆ ಅಣೆಕಟ್ಟೆಗೆ ಭೇಟಿ, ನೀರಿನ ಸಂಗ್ರಹ ಪರಿಶೀಲನೆ

ಉಡುಪಿ: ಬಜೆ ಅಣೆಕಟ್ಟೆಯ ನೀರಿನೊಂದಿಗೆ ವಾರಾಹಿ ಯೋಜನೆಯ ಮೂಲಕವೂ ಉಡುಪಿ ನಗರಕ್ಕೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಆದರೆ, ವಿಪರೀತ ಬಿಸಿಲಿನಿಂದಾಗಿ ಬಜೆ ಡ್ಯಾಂನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನೀರಿನ ಲಭ್ಯತೆ ಕಡಿಮೆ ಇದೆ. ಹೀಗಾಗಿ ಉಡುಪಿ ನಗರ ಭಾಗಕ್ಕೆ ನಿರಂತರ ನೀರು ಪೂರೈಕೆಗೆ ಯಾವುದೇ ಸಮಸ್ಯೆಯಾಗದಂತೆ ಈಗಿನಿಂದಲೇ ಕ್ರಮ ವಹಿಸಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಸೂಚಿಸಿದರು.
ಉಡುಪಿ ನಗರಸಭೆಯಿಂದ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಬಜೆ ಅಣೆಕಟ್ಟು ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಶುಕ್ರವಾರ (ಮೇ 15) ಭೇಟಿ ನೀಡಿ ನೀರಿನ ಸಂಗ್ರಹ ಮಟ್ಟ ಪರಿಶೀಲಿಸಿ ಮಾತನಾಡಿದರು.
ಶುದ್ಧೀಕರಣ ಘಟಕಕ್ಕೆ ಭೇಟಿ
ಬಜೆ ಅಣೆಕಟ್ಟು ನೀರಿನ ಸಂಗ್ರಹ ಸಾಮರ್ಥ್ಯ, ಒಳ ಹರಿವು ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ನಗರದ ಜನತೆಗೆ ನಿರಂತರ ನೀರು ಸರಬರಾಜು ಕುರಿತು ಚರ್ಚಿಸಿದರು. ಬಳಿಕ ನೀರು ಶುದ್ಧೀಕರಣ ಘಟಕಕ್ಕೂ ಭೇಟಿ ನೀಡಿ ಕಾರ್ಯ ಚಟುವಟಿಕೆ ಪರಿಶೀಲಿಸಿದರು. ಘಟಕವನ್ನು ಉತ್ತಮವಾಗಿ ನಿರ್ವಹಣೆ ಮಾಡುವಂತೆ ಹಾಗೂ ನಿರಂತರ ಶುದ್ಧ ಕುಡಿಯುವ ನೀರು ಪೂರೈಸಲು ವಿಶೇಷ ಆದ್ಯತೆ ನೀಡಬೇಕು ಎಂದರು.
ಉಡುಪಿ ನಗರಸಭಾ ಪೌರಾಯುಕ್ತ ಮಹಾಂತೇಶ್​ ಹಂಗರಗಿ, ನಗರಸಭಾ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಮಾಜಿ ಸದಸ್ಯ ಗಿರೀಶ್​ ಅಂಚನ್​, ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತ ದುರ್ಗಾ ಪ್ರಸಾದ್​, ಸಹಾಯಕ ಅಭಿಯಂತ ಚೇತನ್​, ವಾರಾಹಿ ಯೋಜನೆಯ ಅಭಿಯಂತ ಅರ್ಕೇಶ್​ ಗೌಡ ಇತರರು ಉಪಸ್ಥಿತರಿದ್ದರು.