ಗ್ರಾಪಂ ಆಡಳಿತಾಧಿಕಾರಿ ಹಾಗೂ ಪಿಡಿಒಗಳೊಂದಿಗೆ ಯಶ್ಪಾಲ್ ಸುವರ್ಣ ಸಭೆ ನಡೆಸಿದರು. ಎಚ್. ಇಬ್ರಾಹಿಂಪುರ, ಶ್ರೀಕಾಂತ್ ಹೆಗ್ಡೆ ಇದ್ದರು.
* ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ
* ಬ್ರಹ್ಮಾವರದಲ್ಲಿ ಗ್ರಾಪಂ ಪಿಡಿಒಗಳೊಂದಿಗೆ ಸಭೆ
ಉಡುಪಿ: ಮಳೆಗಾಲದ ಪೂರ್ವ ತಯಾರಿ ಬಗ್ಗೆ ಈಗಿನಿಂದಲೇ ಗಮನ ಹರಿಸಬೇಕು. ಕೃತಕ ನೆರೆಗೆ ಕಾರಣವಾಗುವ ತೋಡು, ಮೋರಿಗಳ ಹೂಳೆತ್ತಿಸಬೇಕು. ಕಟ್ಟಡ ಇನ್ನಿತರ ಕಾಮಗಾರಿ ಸ್ಥಳಗಳಲ್ಲಿ ಮುಂಜಾಗ್ರತೆ ವಹಿಸಬೇಕು. ಅಪಾಯಕಾರಿ ವಿದ್ಯುತ್ ಕಂಬ ಹಾಗೂ ಮರಗಳಿದ್ದಲ್ಲಿ ತೆರವು ಮಾಡಿಸಬೇಕು. ಪ್ರಸ್ತುತ ಬಿಸಿಲು ತಾಪ ಹೆಚ್ಚುತ್ತಿದ್ದು, ಕುಡಿಯುವ ನೀರಿಗೆ ತೊಂದರೆ ಆಗಬಹುದು. ಗ್ರಾಪಂ ವತಿಯಿಂದ ಅಗತ್ಯ ಪ್ರಮಾಣದ ನೀರು ಪೂರೈಕೆಗೆ ಸನ್ನದ್ಧರಾಗಿರಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ತಾಲೂಕಿನ 13 ಗ್ರಾಪಂಗಳ ಆಡಳಿತಾಧಿಕಾರಿ ಹಾಗೂ ಪಿಡಿಒಗಳೊಂದಿಗೆ ತುರ್ತು ಸಭೆ ನಡೆಸಿ, ಕುಡಿಯುವ ನೀರಿನ ಸಂಗ್ರಹ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದು ಮಾತನಾಡಿದರು.
ಹೊಸ ಪೈಪ್ ಲೈನ್, ದುರಸ್ತಿ ಕಾಮಗಾರಿ, ಬಾವಿ ಆಳಗೊಳಿಸುವಿಕೆ, ಬೋರ್ವೆಲ್ ಪ್ಲಷಿಂಗ್, ಹೆಚ್ಚುವರಿ ಪಂಪ್ಗಳ ಖರೀದಿ ಇನ್ನಿತರ ಪೂರ್ವ ತಯಾರಿಗಳ ಬಗ್ಗೆ ತುರ್ತಾಗಿ ಗಮನ ಹರಿಸಬೇಕು. ಕಳೆದ ವರ್ಷ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ಪ್ರದೇಶಗಳಿಗೆ ವಿಶೇಷ ಗಮನ ನೀಡಬೇಕು. ಅನಿವಾರ್ಯವಾದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಬ್ರಹ್ಮಾವರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಇಬ್ರಾಹಿಂಪುರ, ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.