ಮಣಿಪಾಲದಲ್ಲಿ ಅಗ್ನಿಶಾಮಕ ದಳ ಕಟ್ಟಡ ಕಾಮಗಾರಿಗೆ ಯಶ್ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು. ಪ್ರಭಾಕರ್ ಪೂಜಾರಿ, ಮಂಜುನಾಥ್, ಕಲ್ಪನಾ ಸುಧಾಮ, ಹರೀಶ್ ಶೆಟ್ಟಿ, ಟಿ.ಜಿ. ಹೆಗಡೆ, ದಿನೇಶ್ ಅಮೀನ್ ಇತರರಿದ್ದರು.
* ಶಾಸಕ ಯಶ್ಪಾಲ್ ಸುವರ್ಣ ಭರವಸೆ
* ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ
ಉಡುಪಿ: ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಕೈಗಾರಿಕಾ ಪ್ರದೇಶ, ಬೃಹತ್ ವಸತಿ ಸಮುಚ್ಚಯ ಒಳಗೊಂಡ ಮಣಿಪಾಲ ನಗರಕ್ಕೆ ಅಗ್ನಿಶಾಮಕ ಘಟಕ ಇರಲಿಲ್ಲ. ಈ ಭಾಗದಲ್ಲಿ ತುರ್ತು ಸಂದರ್ಭದಲ್ಲಿ ಉಡುಪಿಯಿಂದ ಅಗ್ನಿಶಾಮಕ ವಾಹನ ಘಟನಾ ಸ್ಥಳಕ್ಕೆ ಆಗಮಿಸಲು ವಿಳಂಬವಾಗುತ್ತಿತ್ತು. ಇದೀಗ ಈ ಭಾಗಕ್ಕೆ ಅತ್ಯವಶ್ಯಕವಾಗಿದ್ದ ಅಗ್ನಿಶಾಮಕ ಘಟಕ ಶೀಘ್ರ ಕಾರ್ಯಾರಂಭಗೊಂಡು, ಸೇವೆಗೆ ಲಭ್ಯವಾಗಲಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ಮಣಿಪಾಲದ ಅದರ್ಶ ನಗರದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಗ್ನಿಶಾಮಕ ದಳ ಕಚೇರಿಯ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಜನತೆಯ ಪರವಾಗಿ ಅಭಿನಂದನೆ
ಮಣಿಪಾಲ ವಾರ್ಡ್ನ ನಗರಸಭಾ ಮಾಜಿ ಸದಸ್ಯ ಮಂಜುನಾಥ್ ಮಾತನಾಡಿ, ಮಣಿಪಾಲ ಭಾಗಕ್ಕೆ ಅಗ್ನಿಶಾಮಕ ಘಟಕ ಅತೀ ಅವಶ್ಯಕವಾಗಿತ್ತು. ಅದಕ್ಕೆ ವಿಶೇಷ ಮುತುವರ್ಜಿ ವಹಿಸಿ ಮಂಜೂರು ಮಾಡಿಸಿದ ಶಾಸಕ ಯಶ್ಪಾಲ್ ಸುವರ್ಣ ಅವರಿಗೆ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಉಡುಪಿ ನಗರಸಭಾ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಮಾಜಿ ಸದಸ್ಯರಾದ ಕಲ್ಪನಾ ಸುಧಾಮ, ಹರೀಶ್ ಶೆಟ್ಟಿ, ಟಿ.ಜಿ. ಹೆಗಡೆ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಈಶ್ವರ ನಗರ ವಾರ್ಡ್ನ ಅಧ್ಯಕ್ಷ ಸುರೇಶ್ ಆಚಾರ್ಯ, ಕಾರ್ಯದರ್ಶಿ ಕೃಷ್ಣ ನಾಯ್ಕ್, ಪ್ರಮುಖರಾದ ನರಸಿಂಹ ನಾಯಕ್, ಪೃಥ್ವಿರಾಜ್, ನಿತಿನ್ ಪೈ, ಗುರುರಾಜ್ ಭಂಡಾರಿ, ಸತೀಶ್ ಸಾಲ್ಯಾನ್ ಇದ್ದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಣಿಪಾಲ ನಗರದಲ್ಲಿ ಅಗ್ನಿಶಾಮಕ ಘಟಕ ಬಹು ವರ್ಷಗಳ ಬೇಡಿಕೆಯಾಗಿತ್ತು. ನನ್ನ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಅನುದಾನ ಮಂಜೂರು ಮಾಡಿದ್ದು ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಂಡು ಸೇವೆ ಲಭಿಸುವಂತಾಗಬೇಕು.