ಉಡುಪಿ ನಗರದ ಹೆದ್ದಾರಿಯಲ್ಲಿ ತುರ್ತು ಕಾಮಗಾರಿಯ ಕುರಿತು ಅಧಿಕಾರಿಗಳೊಂದಿಗೆ ಯಶ್ಪಾಲ್ ಸುವರ್ಣ ಪರಿಶೀಲಿಸಿದರು. ಪ್ರಭಾಕರ್ ಪೂಜಾರಿ, ಹರೀಶ್ ರಾಮ್ ಬನ್ನಂಜೆ, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಗಿರೀಶ್ ಅಂಚನ್, ಟಿ.ಜಿ. ಹೆಗ್ಡೆ ಇತರರಿದ್ದರು.
* ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸೂಚನೆ
* ಅಂದಾಜು ಪಟ್ಟಿ ಸಿದ್ಧಗೊಳಿಸಲು ಆಗ್ರಹ
ಉಡುಪಿ: ರಾಷ್ಟ್ರೀಯ ಹೆದ್ದಾರಿ 169-ಎ ಉಡುಪಿ ಕರಾವಳಿ ಬೈಪಾಸ್ನಿಂದ ಮಣಿಪಾಲದ ಸಿಂಡಿಕೇಟ್ ಸರ್ಕಲ್ವರೆಗಿನ ರಸ್ತೆ ಮಾರ್ಗದಲ್ಲಿ ಅನೇಕ ಅಗತ್ಯ ಹಾಗೂ ತುರ್ತು ಅಭಿವೃದ್ಧಿ ಕಾಮಗಾರಿ ಆಗಬೇಕಿದೆ. ಆ ಕುರಿತು ತಕ್ಷಣವೇ ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.
ಉಡುಪಿ ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಗಬೇಕಿರುವ ಕಾಮಗಾರಿ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಉಡುಪಿ ನಗರಸಭೆಯ ಅಧಿಕಾರಿಗಳೊಂದಿಗೆ ಸೋಮವಾರ (ಜೂ.22) ವಿವಿಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಕರಾವಳಿ ಜಂಕ್ಷನ್ ಬಳಿಯಿಂದ ಬನ್ನಂಜೆ ನಾರಾಯಣ ಗುರು ಸರ್ಕಲ್ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ, ಬನ್ನಂಜೆ ಜಂಕ್ಷನ್ ಅಭಿವೃದ್ಧಿ, ರಸ್ತೆಯ ಇಕ್ಕೆಲಗಳಲ್ಲಿ ಇಂಟರ್ ಲಾಕ್ ಮರು ಅಳವಡಿಕೆ, ಕಡಿಯಾಳಿ ಕುಂಜಿಬೆಟ್ಟು ಭಾಗದಲ್ಲಿ ಚರಂಡಿ ನಿರ್ಮಾಣ, ಶಾರದಾ ಕಲ್ಯಾಣ ಮಂಟಪ ಜಂಕ್ಷನ್ ಅಭಿವೃದ್ಧಿ, ಎಂಜಿಎಂ ಕಾಲೇಜು ಮುಂಭಾಗದಿಂದ ಇಂದ್ರಾಳಿ ರೈಲ್ವೆ ನಿಲ್ದಾಣದ ರಸ್ತೆಯವರೆಗೆ ಇಂಟರ್ ಲಾಕ್ ಅಳವಡಿಕೆ, ಲಕ್ಷ್ಮೀಂದ್ರನಗರದ ಬಳಿ ವ್ಯವಸ್ಥಿತ ಚರಂಡಿ ನಿರ್ಮಾಣ ಕಾರ್ಯ ತ್ವರಿತವಾಗಿ ಆಗಬೇಕಿದೆ ಎಂದರು.
ಉಡುಪಿ ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಮಾಜಿ ಸದಸ್ಯರಾದ ಹರೀಶ್ ರಾಮ್ ಬನ್ನಂಜೆ, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಗಿರೀಶ್ ಅಂಚನ್, ಟಿ.ಜಿ. ಹೆಗ್ಡೆ, ಸ್ಥಳೀಯ ಮುಖಂಡರಾದ ಸತೀಶ್ ಕುಲಾಲ್ ಕಡಿಯಾಳಿ, ಸತೀಶ್ ಭಾಗವತ್, ಧನ್ಯವಂತ ಪ್ರಭು ಬನ್ನಂಜೆ, ಪೌರಾಯುಕ್ತ ಮಹಾಂತೇಶ ಹಂಗರಗಿ, ಇಂಜಿನಿಯರ್ ಕಾರ್ತಿಕ್, ರಾ.ಹೆ. ಪ್ರಾಧಿಕಾರದ ಅಧಿಕಾರಿಗಳಾದ ಮಂಜನ್ ಗೌಡ, ನವೀನ್ ರಾಜ್, ಶಶಿಧರ್ ಇತರರು ಉಪಸ್ಥಿತರಿದ್ದರು.
ಶಾಲೆ ಹೋಗಲು ಸರ್ವೀಸ್ ರಸ್ತೆ ನಿರ್ಮಿಸಿ
ಇಂದ್ರಾಳಿ ಇಂಗ್ಲಿಷ್ ಮೀಡಿಯಂ ಸ್ಕೂಲ್. ಉಡುಪಿ ನಗರಸಭೆಯ ಮೂಲಕ ಈಗಾಗಲೇ ಮಂಜೂರುಗೊಂಡಿರುವ ಎಂಜಿಎಂ ಕಾಲೇಜು ಮುಂಭಾಗ ಹಾಗೂ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಬಳಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ತಕ್ಷಣ ಆರಂಭಿಸಬೇಕು. ಅಗತ್ಯ ಸ್ಥಳಗಳಲ್ಲಿ ಬಸ್ ಶೆಲ್ಟರ್ ನಿರ್ಮಿಸಲೂ ಸಹ ಅಂದಾಜು ಪಟ್ಟಿ ತಯಾರಿಸಬೇಕು. ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಗೊಂಡ ಬಳಿಕ ಪಕ್ಕದಲ್ಲೇ ಇರುವ ಇಂದ್ರಾಳಿ ಇಂಗ್ಲಿಷ್ ಮೀಡಿಯಂ ಸ್ಕೂಲ್ಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ತೆರಳಲು ಕಷ್ಟವಾಗುತ್ತಿದೆ. ಮಳೆ ಬಂದರೆ ಆ ಜಾಗದಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಹೀಗಾಗಿ ಇಂದ್ರಾಳಿ ಸೇತುವೆಯ ಬಳಿ ಆ ಶಾಲೆಗೆ ಸಂಪರ್ಕಿಸುವಂತೆ ಸರ್ವಿಸ್ ರಸ್ತೆ ನಿರ್ಮಾಣಕ್ಕೂ ಸಹ ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರಿಗೆ ಯಶ್ಪಾಲ್ ಸೂಚಿಸಿದರು.