ಉಡುಪಿಯ ಸಂತೆಕಟ್ಟೆ ಹೆದ್ದಾರಿ ಬಳಿ ಅಂಡರ್ಪಾಸ್ ಕಾಮಗಾರಿಯನ್ನು ಯಶ್ಪಾಲ್ ಸುವರ್ಣ ಅಧಿಕಾರಿಗಳೊದಿಗೆ ಪರಿಶೀಲಿಸಿದರು. ಪ್ರಭಾಕರ್ ಪೂಜಾರಿ, ಉಮೇಶ್ ಶೆಟ್ಟಿ, ಕೃಷ್ಣ ದೇವಾಡಿಗ, ಸತೀಶ್ ನಾಯ್ಕ್, ಮಹಾಂತೇಶ ಹಂಗರಗಿ, ಉದಯ್, ಚಿನ್ಮಯ ಮೂರ್ತಿ, ರಾಮ ಪೂಜಾರಿ ಇತರರಿದ್ದರು.
* ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ
* ಸಂತೆಕಟ್ಟೆ ಹೆದ್ದಾರಿಯಲ್ಲಿ ಕಾಮಗಾರಿ ಪರಿಶೀಲನೆ
ಉಡುಪಿ: ಸಂತೆಕಟ್ಟೆ ಅಂಡರ್ಪಾಸ್ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರ ಆರಂಭವಾಗಿದೆ. ಆದರೆ, ಇನ್ನೂ ಹಲವಾರು ಪೂರಕ ಕಾಮಗಾರಿಗಳು ಸಂತಕಟ್ಟೆ ಹೆದ್ದಾರಿ ಬಳಿ ಆಗಬೇಕಿದೆ. ವಾಹನಗಳ ಸುಗಮ ಸಂಚಾರ, ಪಾದಚಾರಿಗಳ ಸುರಕ್ಷತಾ ದೃಷ್ಟಿಯಿಂದ ಅಗತ್ಯ ಸೌಲಭ್ಯದ ಕುರಿತಾಗಿ ತಕ್ಷಣವೇ ಕ್ರಮ ವಹಿಸಿ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.
ಉಡುಪಿ-ಕುಂದಾಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ-66ರ ಸಂತೆಕಟ್ಟೆಗೆ ಹೆದ್ದಾರಿ ಪ್ರಾಧಿಕಾರ ಹಾಗೂ ನಗರಸಭಾ ಅಧಿಕಾರಿಗಳೊಂದಿಗೆ ಶುಕ್ರವಾರ (ಜೂ.5) ಭೇಟಿ ನೀಡಿ ಅಂಡರ್ ಪಾಸ್ ಬಸ್ ಶೆಲ್ಟರ್ ಸಹಿತ ಪೂರಕ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ಹಲವು ಕೆಲಸ ಬಾಕಿ
ಹೆದ್ದಾರಿಯ ಎರಡೂ ಬದಿಯಲ್ಲಿ ನಿಗದಿತ ಸ್ಥಳದಲ್ಲಿ ಬಸ್ ನಿಲ್ದಾಣ, ಶೌಚಾಲಯ, ಅಂಡರ್ಪಾಸ್ ಸೇತುವೆ ಮೇಲೆ ಡಿವೈಡರ್ ಅಳವಡಿಕೆ, ತಡೆಗೋಡೆ ನಿರ್ಮಾಣ, ನೇಜಾರು ತಿರುವಿನಲ್ಲಿ ವೃತ್ತ ನಿರ್ಮಾಣ, ಎರಡೂ ಬದಿಯ ಸರ್ವೀಸ್ ರಸ್ತೆ ಆರಂಭಗೊಳ್ಳುವಲ್ಲಿ ಅಗಲೀಕರಣ, ಸರ್ವೀಸ್ ರಸ್ತೆಯ ಸುರಕ್ಷತಾ ಬೇಲಿ ವಿಸ್ತರಣೆ, ಸರ್ವೀಸ್ ರಸ್ತೆಯ ಬದಿಯಲ್ಲಿ ಇಂಟರ್ಲಾಕ್ ಅಳವಡಿಕೆ, ಆಶೀರ್ವಾದ್ ಲಕ್ಷ್ಮೀನಗರ ಜಂಕ್ಷನ್ ಅಗಲೀಕರಣ, ದಾರಿದೀಪ ಅಳವಡಿಕೆಯ ಹಲವು ಕೆಲಸ ಆಗಬೇಕಿದೆ. ಈ ಎಲ್ಲ ಕೆಲಸವನ್ನೂ ತಕ್ಷಣ ಕೈಗೊಳ್ಳಬೇಕು ಎಂದರು.
ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಸ್ಥಳೀಯ ಮುಖಂಡರಾದ ಉಮೇಶ್ ಶೆಟ್ಟಿ, ಕೃಷ್ಣ ದೇವಾಡಿಗ, ಸತೀಶ್ ನಾಯ್ಕ್, ಉದಯ್, ಚಿನ್ಮಯ ಮೂರ್ತಿ, ರಾಮ ಪೂಜಾರಿ, ಪ್ರಸಾದ್ ರಾವ್, ಅಮಿತ್ ಪೂಜಾರಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ನಗರಸಭಾ ಪೌರಾಯುಕ್ತ ಮಹಾಂತೇಶ ಹಂಗರಗಿ, ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತ ದುರ್ಗಾಪ್ರಸಾದ್, ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
ಕುಂದಾಪುರ ಭಾಗಕ್ಕೆ ತೆರಳುವ ಎಕ್ಸ್ಪ್ರೆಸ್ ಬಸ್ಗಳು ಸಂತೆಕಟ್ಟೆ ಜಂಕ್ಷನ್ಗೆ ಬಾರದೆ ನೇರವಾಗಿ ಸಂಚರಿಸುತ್ತಿವೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿವೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಸರ್ವೀಸ್ ರಸ್ತೆಯ ಮೂಲಕ ಬಸ್ಗಳು ಸಂಚರಿಸುವಂತೆ ಕ್ರಮ ವಹಿಸಬೇಕು.
— ಯಶ್ಪಾಲ್ ಸುವರ್ಣ. ಉಡುಪಿ ಶಾಸಕ.