ಉಡುಪಿಯಲ್ಲಿ ಆಯೋಜಿಸಿದ್ದ ವಿಶ್ವ ಕ್ಯಾನ್ಸರ್ ತಡೆ ದಿನಾಚರಣೆಯನ್ನು ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ಡಾ. ಎಚ್. ಅಶೋಕ್, ಡಾ. ವಾಸುದೇವ್, ಡಾ. ಲತಾ ನಾಯಕ್, ಡಾ. ಜಿ.ಎಸ್. ಚಂದ್ರಶೇಖರ್, ನಿಧಿ, ಡಾ. ಅಶೋಕಕುಮಾರ್, ಡಾ. ಮಾನಸಾ ಇ.ಆರ್. ಇದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅನಿಸಿಕೆ
* ವಿಶ್ವ ಕ್ಯಾನ್ಸರ್ ತಡೆ ದಿನಾಚರಣೆ ಉದ್ಘಾಟನೆ
ಉಡುಪಿ: ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದು, ರೋಗದ ಆರಂಭಿಕ ಪತ್ತೆಯಿಂದ ಜೀವ ಉಳಿಸಬಹುದು. ಅನಾರೋಗ್ಯಕರ ಜೀವನಶೈಲಿಯಿಂದ ಈ ಕಾಯಿಲೆ ಹೆಚ್ಚುವ ಸಂಭವವಿದ್ದು, ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿದರೆ ಪರಿಣಾಮಕಾರಿಯಾಗಿ ಕ್ಯಾನ್ಸರ್ ಪ್ರಕರಣ ತಗ್ಗಿಸಬಹುದು. ಶಿಕ್ಷಣ, ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯು ಆರೋಗ್ಯ ಸೇವೆಯಲ್ಲಿಯೂ ಇನ್ನಿತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಆದರ್ಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಆದರ್ಶ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಸಾಂಕ್ರಾಮಿಕ ರೋಗಗಳ ಘಟಕ ಎನ್ಸಿಡಿ ಉಡುಪಿ, ಜಿಲ್ಲಾ ಆಸ್ಪತ್ರೆ ಎನ್ಸಿಡಿ ವಿಭಾಗ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಹಾಗೂ ವಿವಿಧ ಸಂ&ಸಂಸ್ಥೆಗಳ ಸಹಕಾರದಲ್ಲಿ ಸೋಮವಾರ (ಫೆ.8) ಆಯೋಜಿಸಿದ್ದ ವಿಶ್ವ ಕ್ಯಾನ್ಸರ್ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಂಸಿಎಚ್ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಕವಿತಾ ಹಾಗೂ ಆದರ್ಶ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ.ಅನಂತ ಎಸ್. ಮಠದ ಅವರು ವಿಶೇಷ ಉಪನ್ಯಾಸ ನೀಡಿದರು. ಕಿಮೋ ಚಿಕಿತ್ಸೆಯ ಫಲಾನುಭವಿಗಳಿಗೆ ಆಹಾರದ ಕಿಟ್ ವಿತರಿಸಲಾಯಿತು.
ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್, ಜಿಲ್ಲಾಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ. ವಾಸುದೇವ್, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಕಾರ್ಯಕ್ರಮ ಅಧಿಕಾರಿ ಡಾ. ಲತಾ ನಾಯಕ್, ಆದರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ. ಜಿ.ಎಸ್. ಚಂದ್ರಶೇಖರ್, ಫುಡ್ ಫಾರ್ ದ ಹಂಗ್ರಿ ಫೌಂಡೇಷನ್ನ ನಿಧಿ, ಐಎಂಎ ಕರಾವಳಿ-ಉಡುಪಿ ಅಧ್ಯಕ್ಷ ಡಾ. ಅಶೋಕಕುಮಾರ್, ಕಾರ್ಯದರ್ಶಿ ಡಾ. ಮಾನಸಾ ಇ.ಆರ್. ಉಪಸ್ಥಿತರಿದ್ದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತೀಶ್ ರಾವ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು. ಶಶಿಧರ್ ಎಚ್. ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಜಿಲ್ಲಾಸ್ಪತ್ರೆ ಆವರಣದಿಂದ ಬ್ರಹ್ಮಗಿರಿ ಸರ್ಕಲ್ ವರೆಗೆ ಕ್ಯಾನ್ಸರ್ ತಡೆ ಜಾಗೃತಿ ಜಾಥಾ ನಡೆಸಲಾಯಿತು. ಜಾಥಾಕ್ಕೆ ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್ ಚಾಲನೆ ನೀಡಿದರು.
ನೂತನ ಜಿಲ್ಲಾಸ್ಪತ್ರೆಯ ಕಾಮಗಾರಿ ಶೇ.70 ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಆಸ್ಪತ್ರೆಯು ಸಾರ್ವಜನಿಕರಿಗೆ ಮುಕ್ತವಾದಲ್ಲಿ ಜಿಲ್ಲೆಯ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಲಿದೆ. ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪೋಷಕಾಂಶಯುಕ್ತ ಆಹಾರ ಸೇವನೆ, ದಿನನಿತ್ಯ ಕನಿಷ್ಠ ಸಮಯವಾದರೂ ವ್ಯಾಯಾಮ ಮಾಡಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.