ಉಡುಪಿಯಲ್ಲಿ ಆಯೋಜಿಸಿದ್ದ ಶಿವಾಜಿ ಸಂಗಮ ಕಾರ್ಯಕ್ರಮವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ನವೀನ್​ ಶೆಟ್ಟಿ, ಉದಯಕುಮಾರ್​ ಶೆಟ್ಟಿ, ದಿನೇಶ್​ ಅಮೀನ್​, ಪ್ರಭಾಕರ ಪೂಜಾರಿ, ಸುಮಲತಾ, ಮಟ್ಟಾರು ರತ್ನಾಕರ್​ ಹೆಗ್ಡೆ ಇತರರಿದ್ದರು. 
ಉಡುಪಿ

ಹಿಂದೂ ಸಮಾಜದ ಧ್ವನಿಯೇ ಶಿವಾಜಿ

* ಶಾಸಕ ಯಶ್​ಪಾಲ್​ ಸುವರ್ಣ ಅಭಿಪ್ರಾಯ

* 'ಶಿವಾಜಿ ಸಂಗಮ' ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಪರಕೀಯರಿಂದ ದೇಶ ರಕ್ಷಿಸುವಲ್ಲಿ ಸ್ಮರಣೀಯ ಕೊಡುಗೆ ನೀಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಹೃದಯ ಸಾಮ್ರಾಟನಾಗಿದ್ದಾರೆ. ಇಂದಿನ ಸಮಸ್ತ ಹಿಂದೂ ಸಮಾಜಕ್ಕೆ ದೊಡ್ಡ, ಮೂಲ ಧ್ವನಿಯೇ ಶಿವಾಜಿಯಾಗಿದ್ದಾರೆ. ಹಿಂದುತ್ವವೇ ಉಸಿರಾಗಿಸಿಕೊಂಡಿರುವ ಬಿಜೆಪಿ, 7 ಮೋರ್ಚಾಗಳ ಮೂಲಕ ಮನೆಮನೆಗೆ ಸರ್ಕಾರಿ ಸೌಲಭ್ಯ ಮುಟ್ಟಿಸುತ್ತಿದ್ದೇವೆ. ಪ್ರಧಾನಿ ಮೋದಿ ಅವರು ಎಲ್ಲರನ್ನೂ ಒಗ್ಗೂಡಿಸುತ್ತಲೇ ನವಭಾರತ ನಿರ್ಮಿಸುತ್ತಿದ್ದಾರೆ. ಇಂದಿನ ಈ ಶಿವಾಜಿ ಸಂಗಮ ಕಾರ್ಯಕ್ರಮ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಬಲ ನೀಡಲಿ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.
ಉಡುಪಿಯ ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿ ಪಕ್ಕದ ಮೈದಾನದಲ್ಲಿ ಬಿಜೆಪಿ ಎಸ್​ಟಿ ಮೋರ್ಚಾ ಉಡುಪಿ ನಗರದ ವತಿಯಿಂದ ಭಾನುವಾರ (ಮಾ.15) ರಾತ್ರಿ ಆಯೋಜಿಸಿದ್ದ ಮರಾಠಿ ಸಂಸ್ಕೃತಿ ಹಾಗೂ ಪರಂಪರೆ ಅನಾವರಣಗೊಳಿಸುವ 'ಶಿವಾಜಿ ಸಂಗಮ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮರಾಠಿ ಸಮುದಾಯದ 15ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹಾಗೂ ಹತ್ತರಕಟ್ಟೆಯ 18 ಗುರಿಕಾರರಿಗೆ ಗೌರವಧನದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಎಸ್​ಟಿ ಸಮುದಾಯಕ್ಕೆ ಸರ್ಕಾರದಿಂದ ಇರುವ ಸೌಲಭ್ಯಗಳ ಮಾಹಿತಿ ಕೈಪಿಡಿ ಬಿಡುಗಡೆ ಮಾಡಲಾಯಿತು. 
ಶಿವಾಜಿ ನಾಟಕ ಪ್ರದರ್ಶನ
ಸಮುದಾಯದ ಯುವ ಪ್ರತಿಭಾನ್ವಿತ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕಾಗಿ ಸಾಂಸತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.  ಗುಂಪು ನೃತ್ಯ, ಭರತನಾಟ್ಯ, ದೇಶಭಕ್ತಿ ಗೀತೆಗಳ ನೃತ್ಯ, ಕೋಲಾಟದ ಮೂಲಕ ಚಿಣ್ಣರು, ಮಹಿಳಾ-ಪುರುಷರು ರಂಜಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿಜಯಕುಮಾರ್​ ಕೋಡಿಯಾಲಬೈಲ್​ ನಿರ್ದೇಶನದಲ್ಲಿ 'ಛತ್ರಪತಿ ಶಿವಾಜಿ' ತುಳು ನಾಟಕ ಪ್ರದರ್ಶನಗೊಂಡಿತು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ, ಮಂಗಳೂರು ವಿಭಾಗ ನಿಕಟಪೂರ್ವ ಪ್ರಭಾರಿ ಕೆ. ಉದಯ್​ ಕುಮಾರ್​ ಶೆಟ್ಟಿ, ಮಾತನಾಡಿದರು. ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್​ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ಉಮೇಶ್​ ನಾಯಕ್​, ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಉಡುಪಿ ಜಿಲ್ಲಾ ಮರಾಠಿ ನಾಯಕ ಸಮಾಜದ ಅಧ್ಯಕ್ಷ ಕೆ.ಟಿ. ನಾಯಕ್​ ಉಪಸ್ಥಿತರಿದ್ದರು. ಖ್ಯಾತ ವಾಗ್ಮಿ ಪ್ರಕಾಶ್​ ಮಲ್ಪೆ ದಿಕ್ಸೂಚಿ ಭಾಷಣ ಮಾಡಿದರು. ಬಿಜೆಪಿ ನಗರ ಅಧ್ಯಕ್ಷ ದಿನೇಶ್​ ಅಮೀನ್​ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಜಲಾ ಸತೀಶ್​ ವಂದೇ ಮಾತರಂ ಗೀತೆ ಹಾಡಿದರು. ಪ್ರಣಮ್ಯಾ ಪ್ರಾರ್ಥಿಸಿದರು. ಸುಶಾಂತ್​ ದೊಡ್ಡನಗುಡ್ಡೆ ಭೋಪರಾಕ್​ ಹೇಳಿದರು. ಎಸ್​ಟಿ ಮೋರ್ಚಾ ಉಡುಪಿ ನಗರ ಅಧ್ಯಕ್ಷೆ ಸುಮಲತಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ವಿನಯ್​ ವಂದಿಸಿದರು. ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಹಿಂದುತ್ವಕ್ಕೆ ನಿತ್ಯವೂ ಸವಾಲು: ಸಂಸದ ಚೌಟ

ಮಂಗಳೂರು ಸಂಸದ ಕ್ಯಾಪ್ಟನ್​ ಬ್ರಿಜೇಶ್​ ಚೌಟ ಮಾತನಾಡಿ, ಕರಾವಳಿ ಕರ್ನಾಟಕಕ್ಕೂ ಶಿವಾಜಿಗೂ ಅವಿನಾಭಾವ ಸಂಬಂಧವಿದೆ. ಪೋರ್ಚುಗೀಸರಿಂದ ಬಸ್ರೂರು ಬಂದರು ಉಳಿಸುವಲ್ಲಿ ಶಿವಾಜಿ ನೌಕೆಯ ಮೂಲಕ ಇಲ್ಲಿಗೆ ದಂಡಯಾತ್ರೆ ಮಾಡಿದ್ದರು. 'ಹಿಂದುತ್ವಕ್ಕೆ ಬದ್ಧತೆ, ಅಭಿವೃದ್ಧಿಗೆ ಆದ್ಯತೆ' ಎಂಬ ಮೂಲಮಂತ್ರದೊಂದಿಗೆ ಬಿಜೆಪಿ ಚುನಾವಣೆ ಎದುರಿಸುತ್ತದೆ. ಆದರೆ, ಇಂದಿಗೂ ಹಿಂದುತ್ವಕ್ಕೆ ಸವಾಲಿದೆ. ಹಿಂದೂ ಸಮಾಜ ಸದಾ ಒಗ್ಗಟ್ಟಾಗಿಯೇ ಇರಬೇಕಿದೆ. ಹಿಂದುತ್ವವೆಂದರೆ ತುಚ್ಚ, ಅದು ಒಳ್ಳೆಯ ಧರ್ಮವಲ್ಲ ಎಂದು ಬಿಂಬಿಸಲು ಹಲವಾರು ವರ್ಷಗಳಿಂದ ಕಾಂಗ್ರೆಸ್​ ಪ್ರಯತ್ನಸುತ್ತಿದೆ. ಸಚಿವ ಪ್ರಿಯಾಂಕ್​ ಖರ್ಗೆ ರಾಜ್ಯದಲ್ಲಿ ಆ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್​ನ ಸೋಲು-ಗೆಲುವು ಇಲ್ಲಿನ ಹಿಂದುತ್ವದ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಹಿಂದುತ್ವದ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ ಎಂದರು.