ಉಡುಪಿ ತಾಲೂಕಿನ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನ ಸಮೀಪದ ಸ್ವರ್ಣ ನದಿಯಲ್ಲಿ ನಿರ್ಮಿಸಿದ ಸ್ನಾನ ಘಟ್ಟವನ್ನು ಬಾಗಿನ ಅರ್ಪಿಸಿ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ಪ್ರಭಾಕರ ಪೂಜಾರಿ, ಅಜಿತ್ ಪೈ, ರಮೇಶ್ ರಾವ್, ಬಾಲಾಜಿ ರಾಘವೇಂದ್ರ ಆಚಾರ್ಯ, ಚಂದ್ರಕಾಂತ್ ಕೆ.ಎನ್., ನಾಗರಾಜ್ ತಂತ್ರಿ, ಹರಿಕೃಷ್ಣ ಶಿವತ್ತಾಯ, ಪ್ರಶಾಂತ್ ಭಟ್, ಮಧುಕರ್ ಮುದ್ರಾಡಿ, ಅನಿತಾ ಡಿಸೋಜ ಇತರರಿದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾಹಿತಿ
* ಶೀಂಬ್ರ ದೇಗುಲದ ಬಳಿ ಸ್ನಾನ ಘಟ್ಟ ಉದ್ಘಾಟನೆ
ಉಡುಪಿ: ಇತಿಹಾಸ ಪ್ರಸಿದ್ಧ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ನದಿ ಸ್ನಾನ ಘಟ್ಟ ಹಲವು ವರ್ಷದಿಂದ ತೀವ್ರ ಕೊರೆತಕ್ಕೊಳಗಾಗಿ ಹಾನಿಗೀಡಾಗುತ್ತಲೇ ಇತ್ತು. ಪ್ರತಿವರ್ಷ ಕೃಷ್ಣಂಗಾರಕ ಚತುರ್ದಶಿಯಂದು ವಿವಿಧ ರಾಜ್ಯಗಳಿಂದ ತೀರ್ಥ ಸ್ನಾನಕ್ಕೆ ಬರುತಿದ್ದ ಸಾವಿರಾರು ಭಕ್ತರಿಗೆ ತೊಂದರೆಯಾಗಿತ್ತು. ಇದೀಗ ಸಣ್ಣ ನೀರಾವರಿ ಇಲಾಖೆಯ ಮೂಲಕ 2.25 ಕೋಟಿ ರೂ. ಅನುದಾನದಲ್ಲಿ ನೂತನ ಸ್ನಾನ ಘಟ್ಟ ನಿರ್ಮಿಸಲಾಗಿದ್ದು ಭಕ್ತಿ, ನಂಬಿಕೆಗೆ ತೊಡಕಾಗದು ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ಉಡುಪಿಯ ಮೂಡುಪೆರಂಪಳ್ಳಿಯಲ್ಲಿರುವ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಸಮೀಪದ ಸ್ವರ್ಣ ನದಿಯಲ್ಲಿ ನಿರ್ಮಿಸಿದ ಸ್ನಾನ ಘಟ್ಟವನ್ನು ಮಂಗಳವಾರ (ಆ.11) ಉದ್ಘಾಟಿಸಿ ಮಾತನಾಡಿದರು.
ಸ್ವರ್ಣ ನದಿಗೆ ಬಾಗಿನ
ಇಲ್ಲಿ ಸ್ನಾನ ಮಾಡಲು ಭಕ್ತರು ಅನುಭವಿಸುತ್ತಿರುವ ಸಮಸ್ಯೆ ಕುರಿತು ತಿಳಿಸಿದ್ದ ದೇವಸ್ಥಾನದ ಆಡಳಿತ ಮಂಡಳಿಯ ಮನವಿಯಂತೆ ಕಾಮಗಾರಿ ಕೈಗೊಳ್ಳಲಾಗಿತ್ತು. ಉಡುಪಿಯ ಜೀವನಾಡಿಯಾಗಿ ಕುಡಿಯುವ ನೀರು, ಕೃಷಿ ಚಟುವಟಿಕೆಗೆ ಸ್ವರ್ಣ ನದಿ ಮೂಲ ಆಸರೆಯಾಗಿದೆ. ಇಂದು ಕೃಷ್ಣಂಗಾರಕ ಚತುರ್ದಶಿ ದಿನದಂದೇ ನದಿಗೆ ದೇವಸ್ಥಾನದ ವತಿಯಿಂದ ಬಾಗಿನ ಅರ್ಪಿಸಿ ನೂತನ ಸ್ನಾನ ಘಟ್ಟ ಲೋಕಾರ್ಪಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ಮೂಲ ಸೌಕರ್ಯ ಒದಗಿಸಲು ವಿಶೇಷ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಉಡುಪಿ ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಗಣ್ಯರಾದ ಅಜಿತ್ ಪೈ, ರಮೇಶ್ ರಾವ್, ಬಾಲಾಜಿ ರಾಘವೇಂದ್ರ ಆಚಾರ್ಯ, ಯುವ ಬ್ರಾಹ್ಮಣ ಪರಿಷತ್ನ ಚಂದ್ರಕಾಂತ್ ಕೆ.ಎನ್., ನಾಗರಾಜ್ ತಂತ್ರಿ, ಹರಿಕೃಷ್ಣ ಶಿವತ್ತಾಯ, ಪ್ರಶಾಂತ್ ಭಟ್ ಪೆರಂಪಳ್ಳಿ, ಅನಿತಾ ಬೆಲಿಂಡ್ ಡಿಸೋಜ, ಮಂಜುನಾಥ್ ಮಣಿಪಾಲ, ಸುಮಾ, ವಿಜಯಾ ಪೂಜಾರಿ, ಗಣಪತಿ ಭಟ್, ವಾದಿರಾಜ ಆಚಾರ್ಯ, ಬಿಜೆಪಿ ಜಿಲ್ಲಾ ವಕ್ತಾರ ಮಧುಕರ್ ಮುದ್ರಾಡಿ, ಶಶಾಂಕ್ ಶಿವತ್ತಾಯ, ಗೋಪಾಲ್ ಆಚಾರ್ ಇನ್ನಿತರರು ಉಪಸ್ಥಿತರಿದ್ದರು.