ಉಡುಪಿಯಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಎಂ.ಎ. ಗಫೂರ್​, ದಿನಕರ್​ ಹೇರೂರು, ಲೋಲಾಕ್ಷ ಶರ್ಮ, ಎಸ್​.ಎಸ್​. ಕಾದ್ರೋಳ್ಳಿ, ಪೂರ್ಣಿಮಾ ಇತರರಿದ್ದರು. 
ಉಡುಪಿ

ನಿರ್ಮಾಣ ಕ್ಷೇತ್ರದ ಪುರಾತನ ಇಂಜಿನಿಯರ್​ ವಿಶ್ವಕರ್ಮ

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅನಿಸಿಕೆ 

* ದೇವಶಿಲ್ಪಿಯ ಜಯಂತಿ ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಭಾರತೀಯ ಸಂಸ್ಕೃತಿ, ಪುರಾಣ, ಧಾರ್ಮಿಕ ಪರಂಪರೆ, ಶಿಲ್ಪಕಲೆಯ ಇತಿಹಾಸ ಅವಲೋಕಿಸಿದಾಗ ವಿಶ್ವಕರ್ಮ ಅವರ ಹೆಸರು ಮಹತ್ವಪೂರ್ಣವಾಗಿ ಗೋಚರಿಸುತ್ತದೆ. ತಂತ್ರಜ್ಞಾನದ ಪರಿವೆಯೇ ಇಲ್ಲದ ಸಾವಿರಾರು ವರ್ಷದ ಹಿಂದೆ ವಿಶ್ವದ ನಿರ್ಮಾಣ, ವಾಸ್ತುಶಿಲ್ಪ ಕ್ಷೇತ್ರದಲ್ಲಿ ತಮ್ಮ ಕೈಚಳಕ ತೋರಿದವರು ದೇವಶಿಲ್ಪಿ ವಿಶ್ವಕರ್ಮರು. ಅಂದಿನ ಇಂಜಿನಿಯರ್​ ಆಗಿದ್ದ ಅವರು ವಿಶ್ವದ ಸೃಷ್ಟಿಕರ್ತರೆಂದೂ ಗುರುತಿಸಿಕೊಂಡಿದ್ದಾರೆ. ಇಂದಿನ ಯುವಪೀಳಿಗೆಗೆ ಅವರ ಸಾಧನೆಯ ಅರಿವು ಮೂಡಿಸಬೇಕಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.
ಉಡುಪಿಯ ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಗುರುವಾರ (ಸೆ.18) ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮುದಾಯಕ್ಕೆ ದೇವರ ವರ
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಮಾತನಾಡಿ, ವೇದ ಮತ್ತು ಉಪನಿಷತ್​ನ ವಿಚಾರಧಾರೆಗಳನ್ನು ಅರಿತಾಗ ಯಾವ ಉದ್ದೇಶಕ್ಕಾಗಿ ದೇವರು ಮನುಕುಲ ಸೃಷ್ಟಿಸಿದ್ದಾನೆಂಬುದು ತಿಳಿಯುತ್ತದೆ. ಆಧುನಿಕ ಯುಗದಲ್ಲಿ ನಾವಿದ್ದರೂ ಸಹ ಯಾವುದೇ ವಿಜ್ಞಾನ, ತಂತ್ರಜ್ಞಾನದ ಅರಿವಿಲ್ಲದ ವಿಶ್ವಕರ್ಮ ಸಮುದಾಯದವರು ಅನಾದಿ ಕಾಲದಿಂದಲೂ ದೇವರು ನೀಡಿದ ವರದ ಮೂಲಕ ವಾಸ್ತುಶಿಲ್ಪ ರಚನೆಯ ಕುಶಲತೆ ಮೈಗೂಡಿಸಿಕೊಂಡಿದ್ದಾರೆ. ಯಾವುದೇ ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಕ್ರಿಯಾಶೀಲತೆಯಿಂದ ಮಠ, ಮಂದಿರ, ದೇವಸ್ಥಾನ, ಚರ್ಚ್​, ಮಸೀದಿಗಳನ್ನು ನಿರ್ಮಿಸುತ್ತಿದ್ದಾರೆ ಎಂದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್​ ಹೇರೂರು ಮಾತನಾಡಿದರು. ಪಡುಕುತ್ಯಾರು ಆನೆಗುಂದಿ ಮಠದ ಲೋಲಾಕ್ಷ ಶರ್ಮ ಅವರು ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಿದರು. ಜಿಪಂ ಉಪ ಕಾರ್ಯದರ್ಶಿ ಎಸ್​.ಎಸ್​. ಕಾದ್ರೋಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಸಾಧನೆಗೈದ ವಿಶ್ವಕರ್ಮ ಸಮಾಜದ ಐವರು ಹಿರಿಯರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಾಖೆಯ ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್​ ಕಾರ್ಯಕ್ರಮ ನಿರ್ವಹಿಸಿದರು.
"

ಕೇಂದ್ರ ಬಿಜೆಪಿ ಸರ್ಕಾರವು ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗಾಗಿ ಪಿಎಂ ವಿಶ್ವಕರ್ಮ ಯೋಜನೆ ಅನುಷ್ಠಾನಗೊಳಿಸಿ ಆ ಸಮುದಾಯದವರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ದೇಶದ ಪಾರಂಪರಿಕ ಕುಲಕಸುಬುಗಳಿಗೆ ಬಲ ತುಂಬುವಲ್ಲಿ ಈ ಯೋಜನೆ ಸಹಕಾರಿಯಾಗಿದ್ದು, ಸಮುದಾಯದ ಲಕ್ಷಾಂತರ ಜನರು ಬದುಕು ಕಟ್ಟಿಕೊಂಡಿದ್ದಾರೆ. ಜಿಲ್ಲೆಯಲ್ಲಿಯೂ ಸಹ ಉಚ್ಚಿಲ ಮಹಾಲಕ್ಷ್ಮೀ ದೇಗುಲ, ಕಾಪು ಮಾರಿಗುಡಿ, ಪಡುಬಿದ್ರಿ, ಕಡಿಯಾಳಿ ಸೇರಿದಂತೆ ವಿವಿಧ ದೇವಾಲಯಗಳಿಗೆ ಹೊಸ ರೂಪ ಕೊಡುವ ಕೆಲಸ ವಿಶ್ವಕರ್ಮ ಸಮಾಜದವರಿಂದ ಆಗಿದೆ.