ಉಡುಪಿ ನಗರಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಯಶ್ಪಾಲ್ ಸುವರ್ಣ ಸಭೆ ನಡೆಸಿದರು. ಪ್ರಭಾಕರ್ ಪೂಜಾರಿ, ಮಹಾಂತೇಶ್ ಹಂಗರಗಿ ಇತರರಿದ್ದರು.
* ಮೆಸ್ಕಾಂ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸೂಚನೆ
* ಉಡುಪಿ ನಗರಸಭೆಯಲ್ಲಿ ಮುಂಗಾರು ಮಳೆ ಸಭೆ
ಉಡುಪಿ: ನಗರದ ಇಂದ್ರಾಳಿ, ಈಶ್ವರ ನಗರ, ಸರಳೇಬೆಟ್ಟು, ಮೂಡುಪೆರಂಪಳ್ಳಿ, ನರಸಿಂಗೆ ಸಹಿತ ವಿವಿಧೆಡೆ ಗಾಳಿ&ಮಳೆ ಸಂದರ್ಭದಲ್ಲಿ ಹೋದ ವಿದ್ಯುತ್ ಸಂಪರ್ಕ 2-3 ದಿನಗಳ ಬಳಿಕ ಬಂದಿದೆ. ಈ ಭಾಗದ ಸಾರ್ವಜನಿಕರು ತುಂಬ ಸಮಸ್ಯೆ ಅನುಭವಿಸಿದ್ದಾರೆ. ಜುಲೈ ಮೊದಲ ವಾರದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯೂ ಇತ್ತು. ಕರೆಂಟ್ ಇಲ್ಲದ್ದರಿಂದ ಅವರಿಗೂ ಸಹ ಮನೆಯಲ್ಲಿ ಸಿದ್ಧತೆ ಮಾಡಿಕೊಳ್ಳಲು ತೊಡಕಾಗಿತ್ತು. ಪದೇಪದೆ ಜನರ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚಿಸಿದರು.
ಮುಂಗಾರು ಮಳೆ ಆರಂಭದ ಬಳಿಕ ಉಡುಪಿ ನಗರಸಭೆಯಲ್ಲಿ ಶುಕ್ರವಾರ (ಜು.10) ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಹಲವೆಡೆ ಮರಬಿದ್ದು ಸಮಸ್ಯೆಯಾಗುತ್ತಿದೆ. ಕೂಡಲೇ ಅಪಾಯಕಾರಿ ಮರಗಳ ತೆರವಿಗೆ ನಗರಸಭೆ ಮತ್ತು ಮೆಸ್ಕಾಂನವರಿಗೆ ಅನುಮತಿ ನೀಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಅಪಾಯಕಾರಿ ಮರಗಳ ತೆರವು ಮಾಡಿ
ನಗರ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಅಪಾಯಕಾರಿ ಮರಗಳಿವೆ ಎಂದು ಮೆಸ್ಕಾಂನವರು ಪಟ್ಟಿಮಾಡಿ, ಜಿಪಿಎಸ್ ಆಧಾರಿತ ಫೋಟೋಗಳನ್ನು ಅರಣ್ಯ ಇಲಾಖೆಯವರಿಗೆ ಕಳುಹಿಸಿ ತೆರವಿಗೆ ಕ್ರಮಕೈಗೊಳ್ಳಬೇಕು. ಮರ ತೆರವಿಗೆ ಪರಿಣಿತ ಐವರನ್ನು ನೇಮಿಸಿಕೊಳ್ಳಬೇಕು. ನಗರಸಭೆ, ಮೆಸ್ಕಾಂ, ಅಗ್ನಿಶಾಮಕ ದಳದವರು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು. 35 ವಾರ್ಡ್ಗಳ ನಿಕಟಪೂರ್ವ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಅಪಾಯಕಾರಿ ಮರಗಳಿದ್ದರೆ ಮಾಹಿತಿ ನೀಡಬೇಕು ಎಂದರು.
ನಗರದಲ್ಲಿ ಸ್ವಚ್ಛತೆ ಕಾಪಾಡಿ
ವಿವಿಧ ವಾರ್ಡ್ಗಳಲ್ಲಿ ಅನಗತ್ಯ ಬೆಳೆದಿರುವ ಹುಲ್ಲು, ಗಿಡಗಂಟಿಗಳ ತೆರವು ಮಾಡಬೇಕು. ಕಸ ಸಂಗ್ರಹ ಕಾರ್ಯವೂ ಸಮರ್ಪಕವಾಗಿ ನಡೆಯಬೇಕು. ನಾಗರಪಂಚಮಿ, ಸ್ವಾತಂತ್ರ್ಯೋತ್ಸವ, ಗಣೇಶನ ಹಬ್ಬ ಬರಲಿದೆ. ಈ ಸಂದರ್ಭದಲ್ಲಿ ಸ್ವಚ್ಛತೆಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಹೆಚ್ಚುವರಿ ಸ್ವಚ್ಛತಾ ಕಾರ್ಮಿಕರನ್ನೂ ನೇಮಿಸಬೇಕು ಎಂದು ಯಶ್ಪಾಲ್ ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಮರ್ಪಕವಾಗಿ ನೀರು ಪೂರೈಸಿ
ಪರ್ಕಳ ಸಹಿತ ವಿವಿಧೆಡೆ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಸೂಕ್ತ ಕ್ರಮಕೈಗೊಳ್ಳಿರಿ ಎಂದು ಶಾಸಕರು ಸೂಚಿಸಿದರು. ಇದಕ್ಕೆ ಅಧಿಕಾರಿಗಳು ಪ್ರತಿಕ್ರಿಯಿಸಿ, ನೀರು ಪೂರೈಕೆಯ ಪೈಪ್ಲೈನ್ ಹಾನಿಯಾಗಿದ್ದರಿಂದ ಕೆಲವೆಡೆ ಸಮಸ್ಯೆಯಾಗಿತ್ತು. ಅದನ್ನು ಸರಿಪಡಿಸಲಾಗಿದೆ. ವಾರಾಹಿಯಿಂದ ಸದ್ಯ ನೀರು ಸರಬರಾಜು ಆಗುತ್ತಿಲ್ಲ. ನಗರ ಸಹಿತ ಹತ್ತಿರದ ಗ್ರಾಮಗಳಿಗೆ ಬಜೆ ಡ್ಯಾಂನಿಂದಲೇ ನೀರು ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ನಗರಸಭಾ ಪೌರಾಯುಕ್ತ ಮಹಾಂತೇಶ ಹಂಗರಗಿ, ಮಾಜಿ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಕಿರಣ್ ಕುಮಾರ್ ಬೈಲೂರು, ಸುಮಿತ್ರಾ ನಾಯಕ್, ಮಾಜಿ ಸದಸ್ಯರಾದ ಗಿರಿಧರ್ ಆಚಾರ್ಯ, ಬಾಲಕೃಷ್ಣ ಶೆಟ್ಟಿ, ಹರೀಶ್ ಶೆಟ್ಟಿ, ಗಿರೀಶ್ ಅಂಚನ್, ವಿಜಯ ಕೊಡವೂರು, ಕಲ್ಪನಾ ಸುಧಾಮ, ಅನಿತಾ ಡಿಸೋಜ, ಭಾರತಿ ಪ್ರಶಾಂತ್, ಅರಣ್ಯ ಇಲಾಖೆ, ಅಗ್ನಿಶಾಮಕ, ಮೆಸ್ಕಾಂನ ಹಾಗೂ ನಗರಸಭೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಬೀದಿಬದಿ ವ್ಯಾಪಾರ ವಲಯಕ್ಕೆ ಕ್ರಮ
ಉಡುಪಿ ನಗರದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಸಂವಹನ ನಡೆಸಿ ಲಾರ್ವಾ ಉತ್ಪತ್ತಿಯಾಗುವಂತಹ ಸ್ಥಳ ಗುರುತಿಸಿ ಕ್ರಿಮಿನಾಶಕ ಸಿಂಪಡಿಸಬೇಕು. ನಗರದಲ್ಲಿರುವ ಗೂಡಂಗಡಿಗಳ ಪರಿಶೀಲನೆ ನಡೆಸಿ ಅವರಿಗೂ ಸ್ವಚ್ಛತೆಯ ಅರಿವು ಮೂಡಿಸಬೇಕು. ಶೌಚಾಲಯ, ಪಾರ್ಕಿಂಗ್ ಪ್ರದೇಶ ಸಹಿತ ಸುಸಜ್ಜಿತ ಬೀದಿಬದಿ ವ್ಯಾಪಾರ ವಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯಶ್ಪಾಲ್ ಸಲಹೆ ನೀಡಿದರು.
ಬಬ್ಬುಸ್ವಾಮಿ ಲೇಔಟ್ಗೆ 7 ಕೋಟಿ ರೂ.
ಸರಳಬೆಟ್ಟುವಿನಲ್ಲಿ ಬಬ್ಬುಸ್ವಾಮಿ ಲೇಔಟ್ ಅಭಿವೃದಿಗಾಗಿ ಕೊಳೆಗೇರಿ ಅಭಿವೃದ್ಧಿ ನಿಗಮದಿಂದ ರಸ್ತೆ ಸಹಿತ ಅಗತ್ಯ ಮೂಲಸೌಲಭ್ಯ ಒದಗಿಸಲು 7 ಕೋಟಿ ರೂ. ಮಂಜೂರಾಗಿದೆ. ಆದರೆ, ಸೌಕರ್ಯಗಳಿಲ್ಲದೆ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರಿಗೆ ಮನೆ ನಿರ್ಮಿಸಲು ಅನುಮತಿ ಕೊಡುವಾಗ ಹಲವು ಕಾನೂನು, ಸಲಹೆ ನೀಡುವ ನಗರಸಭೆ ಅಧಿಕಾರಿಗಳು ಇಷ್ಟು ದೊಡ್ಡ ವಸತಿ ಸಮುಚ್ಛಯ ನಿರ್ಮಿಸುವ ಮೊದಲು ಮೂಲಸೌಲಭ್ಯ ಒದಗಿಸದಿರುವುದು ನಿಜಕ್ಕೂ ಖೇದಕರ ಸಂಗತಿ ಎಂದು ಯಶ್ಪಾಲ್ ಅಸಮಾಧಾನ ವ್ಯಕ್ತಪಡಿಸಿದರು.
ಮಣಿಪಾಲ-ಪೆರಂಪಳ್ಳಿ-ಅಂಬಾಗಿಲು ಮಾರ್ಗದಲ್ಲಿ ರಸ್ತೆ ಅಗಲೀಕರಣಕ್ಕೆ ಭೂಮಿ ಕೊಟ್ಟವರಿಗೆ ಟಿಡಿಆರ್ ಮಾದರಿಯಲ್ಲಿ ಸೌಲಭ್ಯ ನೀಡಲು ನಗರಸಭೆ ವತಿಯಿಂದ ಈವರೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ಈ ಬಗ್ಗೆ ಜಮೀನು ನೀಡಿದ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.
— ಯಶ್ಪಾಲ್ ಸುವರ್ಣ. ಉಡುಪಿ ಶಾಸಕ.